ಆರಗ ವಿರುದ್ಧ ದೇಶ ದ್ರೋಹದ ಕೇಸ್?!
– ಭಾರತ ದೇಶವನ್ನೇ ಭಿಕ್ಷುಕರ, ಹಾವಡಿಗರ ದೇಶ ಎಂದು ಅವಹೇಳನ: ಸುಧೀರ್ ಕುಮಾರ್ ಮುರೊಳ್ಳಿ
– ಕೊಪ್ಪ ನ್ಯಾಯಾಲಯದಲ್ಲಿ ದೂರು ದಾಖಲು
– ಕುಮಾರಸ್ವಾಮಿ ವಿರುದ್ಧ ರಾಜೇಗೌಡ ಕಿಡಿ
NAMMUR EXPRESS NEWS
ತೀರ್ಥಹಳ್ಳಿ: ಭಾರತ ದೇಶವನ್ನೇ ಭಿಕ್ಷುಕರ, ಹಾವಡಿಗರ ದೇಶ ಎಂದು ಇಡೀ ದೇಶವನ್ನೇ ಅವಮಾನ ಮಾಡಿದ, ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅವಹೇಳನ ಮಾಡಿರುವ ತೀರ್ಥಹಳ್ಳಿ ಶಾಸಕರು, ಮಾಜಿ ಗೃಹ ಮಂತ್ರಿ, ಬಿಜೆಪಿ ಪಕ್ಷದ ಹಿರಿಯ ನಾಯಕ ಆರಗ ಜ್ಞಾನೇಂದ್ರ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ನೀಡಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ, ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಲೋಕ ಸಭಾ ಚುನಾವಣೆ ಪ್ರಚಾರದ ವೇಳೆ ಕೊಪ್ಪದಲ್ಲಿ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದೇವರನ್ನೇ ಹೀಯಾಳಿಸುವ, ನಮ್ಮ ದೇಶವನ್ನು ಭಿಕ್ಷುಕರ, ಹಾವಡಿಗರ ದೇಶ ಎಂಬ ಹೇಳಿಕೆ ನೀಡಿದ ಜ್ಞಾನೇಂದ್ರ ಇಡೀ ದೇಶವನ್ನೇ ಅವಮಾನ ಮಾಡಿದ್ದಾರೆ. ಬ್ರಿಟಿಷ್ ಮನಸ್ಥಿತಿ ಇರುವ ಆರಗ ಜ್ಞಾನೇಂದ್ರ ಇಡೀ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.
ತೀರ್ಥಹಳ್ಳಿಯಿಂದ ನೂರಾರು ಧೀಮಂತರು ದೇಶಕ್ಕೆ ಕೊಡುಗೆ ನೀಡಿದ್ದಾರೆ. 2014ಕ್ಕಿಂತ ಮುಂಚೆ ಎಲ್ಲವನ್ನು ಕಾಂಗ್ರೆಸ್ ಮಾಡಿದೆ. ಜ್ಞಾನೇಂದ್ರ ಅವರೇ ನಿಮ್ಮ ಕುಟುಂಬದವರು ಈ ಹಿಂದೆ ಭಿಕ್ಷುಕರಾಗಿದ್ದಾರಾ? ಹಾವಾಡಿಗರರಾಗಿದ್ದಾರಾ? ಇವರೆಲ್ಲ 2014ಕ್ಕಿಂತ ಮುಂಚೆ ಬಂದವರು.ತೀರ್ಥಹಳ್ಳಿ ಕ್ಷೇತ್ರದಲ್ಲಿ ಇದ್ದವರೆಲ್ಲ ಹವಾಡಿಗಾರಾ? ನಿಮ್ಮನ್ನು ಬೆಳೆಸಿದ ಆರ್ ಎಸ್ ಎಸ್ ನಾಯಕರು ಭಿಕ್ಷುಕರಾ? ದೇಶಕ್ಕೆ ಅವಮಾನ ಮಾಡಿದ ಕಾರಣ ದೇಶ ದ್ರೋಹ ದೂರು ದಾಖಲು ಮಾಡುತ್ತೇವೆ. ಕೊಪ್ಪ ನ್ಯಾಯಾಲಯದಲ್ಲಿ ದೂರು ದಾಖಲು ಮಾಡುತ್ತೇವೆ.
ನಮ್ಮ ದೇಶ ವಿಶ್ವಕ್ಕೆ ಅನೇಕ ಹಿರಿಮೆ, ಸಂಸ್ಕೃತಿ, ವೇದ ಉಪನಿಷತ್ ಕೊಟ್ಟ ದೇಶವನ್ನು ಅವಮಾನ ಮಾಡಿದ್ದಾರೆ.
ಮೋದಿ ಬಂದ ಮೇಲೆ ದೇಶ, ಅಭಿವೃದ್ಧಿ ಎಂದರೆ ಆರಗ ಮನೆ ರಸ್ತೆ, ಮೋರಿ, ಅವ್ರು ಓದಿದ್ದು ಶಾಲೆ ಎಲ್ಲವೂ ಮೋದಿ ಕಟ್ಟಿದ್ದಾ?. ಬಾಯಲ್ಲಿ ಅಭಿವೃದ್ಧಿ ಹೇಳೋದು ಮಾತ್ರವಲ್ಲ, ನಿಮ್ಮ ಹಿಂದಿನ ಜೀವನ ಒಮ್ಮೆ ನೋಡಿ ಎಂದರು.
ಬಿಜೆಪಿಯು ದೇಶದಲ್ಲಿ ಸಂವಿಧಾನ ಇರಬಾರದು. ಒಬ್ಬ ಸಾಮಾನ್ಯನ ಮಗ ಇಂಜಿನಿಯರ್ ಆಗಬಾರದು. ಬಡವರು ಶ್ರೀಮಂತರಾಗಬಾರದು. ರೈತ ಉದ್ದಾರವಾಗಬಾರದು ಎಂದು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಕಸ್ತೂರಿ ರಂಗನ್ ವರದಿ ಸಮಸ್ಯೆಗೆ ಬಿಜೆಪಿ ಸಂಸದರೇ ಕಾರಣ!
ಮಲೆನಾಡು ಪ್ರತಿನಿಧಿಸುತ್ತಿದ್ದ ನಮ್ಮ ಸಂಸದರು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಹಳ ದೊಡ್ಡ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದಾರೆ. ಶರದ್ ಪವಾರ ಅಂತ ಹಿರಿಯ ನಾಯಕರು ಆ ಸಭೆಗೆ ಹಾಜರಾಗಿದ್ರು. ಆದರೆ ರಾಘವೇಂದ್ರ, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಸಭೆಗೆ ಹೋಗಿಲ್ಲ. ಈ ಕಾರಣ ಇವತ್ತು ಜನ ತೊಂದರೆ ಅನುಭವಿಸುತ್ತಿದ್ದಾರೆ. ಅನಂತ ಹೆಗ್ಡೆ ಆಶೀಸರ ಎಂಬ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಇಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ರೈತರು, ಬಡವರ ಬದುಕಿಗೆ ಕೈ ಹಾಕಿದರೆ ನಾವು ಬಿಡುವುದಿಲ್ಲ ಎಂದರು.
ಜಯಪ್ರಕಾಶ್ ಹೆಗ್ದೆ ಗೆಲ್ತಾರೆ…
ಪಕ್ಷದ ನಾಯಕತ್ವಕ್ಕೆ ನಾವೆಲ್ಲರೂ ಬದ್ದ. ಜಯಪ್ರಕಾಶ್ ಹೆಗ್ಡೆ ಅವರು ಉತ್ತಮ ಜನಪರ ಕೆಲಸ ಮಾಡಿದವರು. ಜ್ಞಾನ ಉಳ್ಳವವರು. ನನಗೆ ಅವಕಾಶ ಸಿಗದಿರುವುದೇ ನನಗೆ ಒಳ್ಳೆಯದಾಯಿತು. ಜಯಪ್ರಕಾಶ್ ಹೆಗ್ಡೆ ಅಂತಹ ಸಂಸದ ದೆಹಲಿಯಲ್ಲಿ ದನಿ ಎತ್ತಬೇಕು. ಹೀಗಾಗಿ ನಾವೆಲ್ಲರೂ ಸೇರಿ ಅವರನ್ನು ಬೆಂಬಲಿಸಿದ್ದೇವೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಶೋಭಾ ಕರಂದ್ಲಾಜೆ, ಸದಾನಂದ ಗೌಡ ಇಬ್ಬರೂ ಏನೂ ಮಾಡಿರಲಿಲ್ಲ. ಶೋಭಾ ಬೆಂಗಳೂರಲ್ಲಿ ಸೋತರೆ ಅದು ಕರ್ನಾಟಕದ ಗೆಲುವು.ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಕುಮಾರಸ್ವಾಮಿ ವಿರುದ್ಧ ರಾಜೇಗೌಡ ಕಿಡಿ
ಶೃಂಗೇರಿ ಶಾಸಕ ರಾಜೇಗೌಡ ಮಾತನಾಡಿ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶೆ ಆಗಿರುವುದು ಕಾಣುತ್ತೇವೆ. ಆದರೆ ಒಮ್ಮೆ ಸಿಎಂ ಆದವರು ಕುಮಾರಸ್ವಾಮಿ ಗ್ಯಾರಂಟಿ ಯೋಜನೆಯನ್ನು ಪೆನ್ ಡ್ರೈವ್ ಹೋಲಿಕೆ ಮಾಡಿದ್ದಾರೆ. ರಾಜ್ಯವನ್ನು ಆಳಿದವರು ಇಂತಹ ಹೇಳಿಕೆ ನೀಡಬಾರದು ಎಂದರು.
ಬಿಜೆಪಿಗರಿಗೆ ಕಿಮ್ಮನೆ ಸವಾಲು!
ನಮ್ಮ ಜನಪ್ರಿಯ ಗ್ಯಾರಂಟಿ ಯೋಜನೆಯನ್ನು ಯಾವುದೇ ಬಿಜೆಪಿ ವ್ಯಕ್ತಿ ತಿರಸ್ಕಾರ ಮಾಡಿಲ್ಲ. ತಾಕತ್ತು, ದಮ್ಮು ಇದ್ದರೆ ಎಲ್ಲಾ ಯೋಜನೆಯನ್ನು ಗ್ಯಾರಂಟಿ ರದ್ದು ಮಾಡುತ್ತೇವೆ ಎಂದು ಘೋಷಣೆ ಮಾಡಿ ಚುನಾವಣೆ ಎದುರಿಸಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.