ತೀರ್ಥಹಳ್ಳಿಯಲ್ಲಿ ಆಕ್ಸಿಡೆಂಟ್ ಆಕ್ಸಿಡೆಂಟ್..!
– ಒಂದೇ ತಿಂಗಳಿನಲ್ಲಿ ಸುಮಾರು 15 ಅಪಘಾತ
– ಆಕ್ಸಿಡೆಂಟ್ ಝೋನ್ ಆಗುತ್ತಿದೆಯಾ ತೀರ್ಥಹಳ್ಳಿ?
– ವಾಹನ ಸವಾರರೇ, ನಿಧಾನವಾಗಿ ಚಲಿಸಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ದಿನೇ ದಿನೇ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಸಂಚಾರಿ ಪೋಲೀಸರು ಅಪಘಾತ ತಡೆಗೆ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ತಂದರೂ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಈ ಹಿನ್ನಲೆ ಒಂದೇ ತಿಂಗಳಿನಲ್ಲಿ ತೀರ್ಥಹಳ್ಳಿಯಲ್ಲಿ 15ಕ್ಕೂ ಹೆಚ್ಚು ಅಪಘಾತ ಆಗಿದೆ. 10ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ರಸ್ತೆ ಅಪಘಾತಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.ದಿನೇ ದಿನೇ ಅಪಘಾತಗಳ ಪ್ರಮಾಣ ಜಾಸ್ತಿಯಾಗುತ್ತಿದೆ.
ರಸ್ತೆ ಜಾಗೃತಿ ಮೂಡಿಸಿದರೂ ಫಲ ನೀಡುತ್ತಿಲ್ಲ!
ರಸ್ತೆ ಸುರಕ್ಷತೆ ಬಗ್ಗೆ ಪೊಲೀಸ್ ಇಲಾಖೆಯವರು ನಿರಂತರವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರ ಸಹಕಾರ ಇಲ್ಲವಾದರೆ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಆದರೂ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಆದರೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ. ಒನ್ ವೇನಲ್ಲಿ ಚಲಿಸುತ್ತಾರೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಅರ್ಧ ಹೆಲ್ಮೆಟ್ ಬಳಸಿ ವಾಹನ ಚಲಾಯಿಸುತ್ತಾರೆ. ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಸವಾರರು ಜವಬ್ದಾರಿಯುತವಾಗಿ ವಾಹನ ಚಲಾಯಿಸಿದಾಗ ಮಾತ್ರ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವ ಮೂಲಕ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬೇಕು.
ತೀರ್ಥಹಳ್ಳಿ ಪಟ್ಟಣದಲ್ಲಿ ಅಪಘಾತ ಹೆಚ್ಚಾಯ್ತು!
ತೀರ್ಥಹಳ್ಳಿ ಪಟ್ಟಣದಲ್ಲಿ ದಿನೇ ದಿನೇ ಅಪಘಾತ ಹೆಚ್ಚಳವಾಗಿದೆ. ಬುಧವಾರ ಆಗುಂಬೆ ಬಸ್ ನಿಲ್ದಾಣದಲ್ಲಿ ಲಾರಿ ಮತ್ತು ಕಟ್ಟಿಗೆ ಹೊಡೆಯುವ ಟ್ರಾಕ್ಟರ್ ಮಧ್ಯ ಬೈಕ್ ಸಿಲುಕಿ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಸವಾರ ಪಾರಾಗಿದ್ದಾನೆ. ಇನ್ನು ಕೊಪ್ಪ ಸರ್ಕಲ್ ಬಳಿ ಬೈಕ್ ಡಿಕ್ಕಿಯಾಗಿದೆ. ಬೆಜ್ಜವಳ್ಳಿಯಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಓರ್ವ ಗಂಭೀರಗೊಂಡಿದ್ದಾನೆ.