ಮಾಮ್ ಕೋಸ್ ಸಂಸ್ಥೆ ವಿರುದ್ಧ ಆರೋಪ ರಾಜಕೀಯ ಪ್ರೇರಿತ!
– ರೈತರ ಹಿತರಕ್ಷಣೆಗೆ ಸದಾ ಶ್ರಮಿಸುವ ಮಾಮ್ ಕೋಸ್ ಸಂಸ್ಥೆ
– ಆರೋಪ ಸುಳ್ಳು: ಉಪಾಧ್ಯಕ್ಷ ಮಹೇಶ್ ಹೆಚ್.ಎಸ್. ಹುಲ್ಕುಳಿ
NAMMUR EXPRESS NEWS
ತೀರ್ಥಹಳ್ಳಿ: ಮಾಮ್ ಕೋಸ್ ಸಂಸ್ಥೆಯ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಮ್ಯಾಮ್ ಕೋಸ್ ಆಡಳಿತ ಸ್ಪಷ್ಟನೆ ನೀಡಿದೆ.
ಮಾಮ್ ಕೋಸ್ ಅಡಿಕೆಯಲ್ಲಿ ಕಲಬೆರಕೆ’, ‘ರೈತರಿಗೆ ಮಾಮ್ ಕೋಸ್ನಲ್ಲಿ ನಿರಂತರ ಮೋಸ’, ‘ಮಾಮ್ ಕೋಸ್ನಿಂದ ಅನ್ಯಾಯವಾಗಿದೆ’, ಇತ್ಯಾದಿ ಶಿರೋನಾಮೆ ಅಡಿಯಲ್ಲಿ ಮಾಮ್ ಕೋಸ್ ಕುರಿತು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ನ. 11ರಂದು ‘ಮಾಮ್ ಕೋಸ್ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ಕಚೇರಿ ತೀರ್ಥಹಳ್ಳಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಉಪಾಧ್ಯಕ್ಷರಾದ ಮಹೇಶ್ ಹೆಚ್.ಎಸ್. ಹುಲ್ಕುಳಿ ಪ್ರತ್ಯುತ್ತರ ನೀಡಿದರು.ಉದಯಕುಮಾರ್ ಎಂಬುವರು ಮಾಮ್ ಕೋಸ್ ಸಂಸ್ಥೆಯು ರೈತ ವಿರೋಧಿಯಾಗಿದ್ದು, ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಸಂಘದ ಸದಸ್ಯರಾಗಿದ್ದು, ಇವರಿಗೆ ಮಾಮ್ ಕೋಸ್ ಸಂಸ್ಥೆಯ ಬಗ್ಗೆ ಯಾವುದೇ ಪೂರ್ವಾಪರ ತಿಳಿದಿರುವುದಿಲ್ಲ. ರಾಶಿ ಕಲ್ಲುಗೋಟ್ ಅಡಿಕೆಗೆ ಉತ್ತಮ ಬೆಲೆ ಸಿಗಲು ಸಾಧ್ಯವಿಲ್ಲ.ರೈತರ ಪರವಾಗಿ ನಿಲ್ಲಬೇಕಾದಂತಹ ಒಂದು ಸಂಸ್ಥೆಯಲ್ಲಿ ಸ್ವಾರ್ಥಕ್ಕೋಸ್ಕರ ಈ ರೀತಿಯ ಅಡ್ಡ ದಾರಿ ಹಿಡಿದಿರುವುದು ದುರಾದೃಷ್ಟಕರ, ಇವರ ಹೇಳಿಕೆಯೂ ಕೂಡ ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದ್ದು, ಆಡಳಿತ ಮಂಡಳಿ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಮಹೇಶ್ ಹೆಚ್.ಎಸ್. ಹುಲ್ಕುಳಿ ಹೇಳಿದ್ದಾರೆ.
* ರೈತರ ಹಿರಕ್ಷಣೆಗೆ ಸದಾ ಶ್ರಮಿಸುವ ಮಾಮ್ ಕೋಸ್ ಸಂಸ್ಥೆ
ಮಾಮ್ಕೋಸ್ ಸಂಸ್ಥೆಯು ಪ್ರಾರಂಭವಾದಾಗಿನಿಂದಲೂ ರೈತರ ಹಿತರಕ್ಷಣೆಗಾಗಿಯೇ ಹೋರಾಡುತ್ತಿದೆ. ಕೇವಲ ಅಡಿಕೆ ಮಾತ್ರವಲ್ಲದೆ, ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ಮೈಲುತುತ್ತ, ಗೊಬ್ಬರ ಮಾರಾಟ, ಯಂತ್ರಕ್ಕೆ ಸಹಾಯಧನ, ಸದಸ್ಯರ ಕುಟುಂಬಕ್ಕೆ ಆರ್ಥಿಕ ಸಹಾಯ, ಮರಣೋತ್ತರ ನಿಧಿ ಸೌಲಭ್ಯ, ಗುಂಪು ವಿಮಾ ಸೌಲಭ್ಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿಕೆ. ಆರೋಗ್ಯ ಹಿತರಕ್ಷಣೆಗಾಗಿ ಆರೋಗ್ಯ ವಿಮಾ ಯೋಜನೆ ಈ ರೀತಿಯ ಹತ್ತು ಹಲವಾರು ಯೋಜನೆಗಳನ್ನು ನಮ್ಮ ಸಂಸ್ಥೆಯು ಹಮ್ಮಿಕೊಂಡಿದ್ದು, ಸಂಸ್ಥೆಯ ಲಾಭದಲ್ಲಿ ಸುಮಾರು ಶೇ. 60 ಕ್ಕಿಂತಲೂ ಹೆಚ್ಚಿನ ಮೊಬಲಗನ್ನು ರೈತರಿಗೆ ವಿನಿಯೋಗಿಸುತ್ತಿದೆ. ಸದಾಕಾಲ ರೈತರ ಹಿರಕ್ಷಣೆಗಾಗಿ ಶ್ರಮಿಸುತ್ತಿರುವ ಮಾಮ್ ಕೋಸ್ ಸಂಸ್ಥೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಅಡಿಕೆ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಉದ್ದೇಶವನ್ನು, ಷಡ್ಯಂತ್ರವನ್ನು ಹಲವರು ಮಾಡುತ್ತಿದ್ದು, ಇನ್ನು ಮುಂದೆ ಯಾವುದೇ ಸಾಕ್ಷಾಧಾರ, ಸತ್ಯಾಂಶ ಇಲ್ಲದೆ ರಾಜಕೀಯ ಪ್ರೇರಿತವಾಗಿ ಮತ್ತು ದುರುದ್ದೇಶದಿಂದ ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮೂಲಕ ಮಾಮ್ ಕೋಸ್ ಸಂಸ್ಥೆಯ ಮೇಲೆ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಅಡಿಕೆ ಬೆಳೆಗಾರ ರೈತರು ಇವರ ಆರೋಪಕ್ಕೆ ವಿಚಲಿತರಾಗದೆ, ಗಂಭೀರವಾಗಿ ಪರಿಗಣಿಸಿದೆ ಎಂದಿನಂತೆಯೇ, ಸಂಸ್ಥೆಯೊಂದಿಗೆ ವಿಶ್ವಾಸವಿರಿಸಿ ವ್ಯವಹರಿಸಲು ಈ ಮೂಲಕ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಸಿ. ಬಿ ಈಶ್ವರ್, ಜಯಶ್ರೀ, ರತ್ನಾಕರ್ ಬಳಗಿನಮನೆ ಉಪಸ್ಥಿತರಿದ್ದರು.