ಬಾಯಿ ತಪ್ಪಿನಿಂದ ಖರ್ಗೆ ಅಂದಿದ್ದೇನೆ…ಮಲ್ಲಿಕಾರ್ಜುನ ಖರ್ಗೆ ಅಂತ ಹೇಳಿಲ್ಲ
– ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
– ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ
– ಆಡದ ಮಾತನ್ನು ದೊಡ್ಡ ಮಾಡಿ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
NAMMUR EXPRESS NWES
ತೀರ್ಥಹಳ್ಳಿ: ( Thirthahalli ) ಅರಣ್ಯ ಸಚಿವರ ವಿರುದ್ಧ ಮಾತನಾಡುವಾಗ ಬಾಯಿ ತಪ್ಪಿನಿಂದ ಖರ್ಗೆ ಅಂತ ಹೇಳಿದ್ದೇನೆ. ಆದರೆ ಎಲ್ಲೂ ಸಹ ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ. ಅವರ ಬಗ್ಗೆ ಬಣ್ಣದ ಬಗ್ಗೆ ವಯಕ್ತಿಕ ನಿಂದನೆ ಮಾಡಿಲ್ಲ. ಅವರ ಜೊತೆ ವಿಧಾನ ಸಭೆಯಲ್ಲಿ ಕೆಲಸ ಮಾಡಿದ್ದೇನೆ. ಅವರನ್ನು ತುಂಬಾ ಗೌರವದಿಂದ ನೋಡುತ್ತೇನೆ. ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದರು. ನಾನು ಹೇಳದ ಹೇಳಿಕೆಯನ್ನು ದೊಡ್ಡದು ಮಾಡಿ ಕಾಂಗ್ರೆಸ್ ನವರು ರಾಜಕಾರಣಕ್ಕೆ ಉಪಯೋಗಿಸಿಕೊಂಡು ಪ್ರಚೋದನೆ ನೀಡಿ ದೂರು ಕೊಡಿಸಿದ್ದಾರೆ.ರಾಜಕೀಯವಾಗಿ ಟೀಕೆ ಮಾಡಿರಬಹುದು ಹಾಗೂ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ ಹಾಗೇನಾದರೂ ಆದರೆ ಕೊಟ್ಟ ಶಿಕ್ಷೆಗೆ ಒಳಗಾಗುತ್ತೇನೆ. ಕಾಂಗ್ರೆಸ್ ನವರು ಸುಖಾ ಸುಮ್ಮನೆ ಇದನ್ನು ದೊಡ್ಡ ವಿಷಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಯಲು ಸೀಮೆ, ಮಲೆನಾಡಿನ ಬದುಕು ಬಗ್ಗೆ ಮಾತನಾಡಿದ್ದೇನೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರ ಹೇಳಿಕೆ ಪಶ್ಚಿಮ ಘಟ್ಟದ ತಾಲೂಕುಗಳಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದರೂ ಸರಿಯಾಗಿ ವರದಿ ನೀಡಿಲ್ಲ. ಈಗ ಸುಪ್ರೀಂ ಕೋರ್ಟ್ ಹಸಿರು ಪೀಠ ಕೈಗೆ ಎತ್ತಿಕೊಂಡಿದೆ. ಹಸಿರು ಪೀಠ ಒತ್ತಡ ಮಾಡಿದಾಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಳಿ ವರದಿ ಕೇಳಿದ್ದರು. ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ನಿರ್ಣಯ ಕಳುಹಿಸಿಕೊಡಲಾಗಿತ್ತು. ಬೊಮ್ಮಾಯಿ ಸರ್ಕಾರ ಅಥವಾ ಯಡಿಯೂರಪ್ಪ ಸರ್ಕಾರ ಇದ್ದಾಗ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿ ಇಲ್ಲ. ತಿರಸ್ಕಾರ ಮಾಡಬೇಕು ಎಂದು ಹೇಳಿದ್ದೇವು. ಅರಣ್ಯ ಸಚಿವರಿಗೆ ಈ ವಿಷಯದ ಬಗ್ಗೆ ಗೊತ್ತಿಲ್ಲದೆ ಮಾತನಾಡಿರಬಹುದು. ಆ ವಿಷಯದ ಬಗ್ಗೆ ಮಾತನಾಡಿ ಹೀಗೆ ಆಗಿದೆ. ಅವರ ಜಾತಿ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಲೆನಾಡ ಜನ ಹಾಗೂ ಬಯಲುಸೀಮೆ ಜನರ ಬಗ್ಗೆ ಹೇಳಿದ್ದೇನೆ. ಅರಣ್ಯ ಸಚಿವರ ಬಗ್ಗೆಯೂ ಕಿಚಾಯಿಸಿದ್ದಲ್ಲ ಎಂದರು. ದಲಿತರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ನಮಗೆ ತಿಳಿದಿದೆ. ಕೆಜೆ ಹಳ್ಳಿ, ಡಿಜೆ ಹಳ್ಳಿ ಬಗ್ಗೆ ಏನು ಹೇಳಿದ್ದೀರಾ ಎಂದು ಗೊತ್ತು ಅವರನ್ನು ಅಮಾಯಕರು ಅಂದವರು ನೀವು ನಿಮಗೆ ದಲಿತರ ಬಗ್ಗೆ ಎಷ್ಟು ಅನುಕಂಪ ಇದೆ ಗೊತ್ತಿದೆ ಎಂದರು.
ನಾನು ಜೀವಂತ ಬದುಕಿರುವುದೇ ಅವರಿಗೆ ಸಹಿಸಲಾಗುತ್ತಿಲ್ಲ
ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನೀವು ಸೋತಿದ್ದೀರಾ. ಆ ಸೋಲನ್ನು ಸ್ವೀಕಾರ ಮಾಡಲು ಸಂಸ್ಕಾರ ಬೇಕು. ನಾನು ಐದು ಬಾರಿ ಸೋತಿದ್ದೇನೆ. ಆದರೆ ಸೋತಾಗ ನಿಮ್ಮ ಬಳಿ ಬೆರಳು ತೋರಿಸುವುದನ್ನು ಹಾಗೂ ನಿಮ್ಮ ಚಾರಿತ್ರ್ಯ ಹರಣ ಮಾಡಿಲ್ಲ. ಈಗ ನೀವು ಆ ಸೋಲನ್ನು ಜಿದ್ದನ್ನು ನನ್ನ ಮೇಲೆ ತೀರಿಸಿಕೊಳ್ಳಲು ಒಂದು ಅವಕಾಶಕ್ಕೆ ಕಾಯ್ತಾ ಇದ್ರಿ ಅಂತ ಕಾಣಿಸುತ್ತದೆ. ಕೋರ್ಟ್ ಗೆ ಹೇಗೆ ಹಾಕಬೇಕು ಕಂಪ್ಲೇಂಟ್ ಹೇಗೆ ಕೊಡಬೇಕು. ಮಾಧ್ಯಮದಲ್ಲಿ ನನ್ನ ನೇಣಿಗೆ ಏರಿಸಬೇಕು ಎಂದು ಹೇಳಿಲ್ಲ. ನಾನು ಜೀವಂತ ಬದುಕಿರುವುದೇ ಅವರಿಗೆ ಸಹಿಸಲಾಗುತ್ತಿಲ್ಲ ಹಾಗಾಗಿ ನನ್ನ ಚಾರಿತ್ರ್ಯ ಹರಣ ಮಾಡುತ್ತಿರುತ್ತಾರೆ ಎಂದು ಜ್ಞಾನೇಂದ್ರ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಬೇಸರ ತೋಡಿಕೊಂಡರು.
ಸರ್ಕಾರ ನಡೆಸಲು ಆಗದವರ ಟೀಕೆ!
ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಭರವಸೆ ಈಡೇರಿಸಲು ಆಗುತ್ತಿಲ್ಲ. ಕೆ ಎಸ್ ಆರ್ ಟಿ ಸಿ ಬಸ್ ಗೆ 700 ಕೋಟಿ ಹಣ ಖರ್ಚಾಗಿದೆ,120 ಕೋಟಿ ನೀಡಿದ್ದಾರೆ.ಮುಂದಿನ ತಿಂಗಳು ಡೀಸೆಲ್ ಹಾಕಿಸಲು ಹಾಗೂ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಕೆಪಿಟಿಸಿಎಲ್ ಸಾವಿರಾರು ಕೋಟಿ ನಷ್ಟದಲ್ಲಿದೆ. ಈಗಲೇ ವಿದ್ಯುತ್ ಬಿಲ್ ಕಟ್ಟುತ್ತಿಲ್ಲ. ಈಗಿನಿಂದ ಗೊತ್ತಾಗುತ್ತದೆ. ಇವರು ಭರವಸೆ ನೀಡಿದ್ದಾರೆ ಕೊಡಬೇಕು. ಸರ್ಕಾರ ಬಂದು ಮೂರು ತಿಂಗಳಾಗಿದೆ ಅದರ ಬಗ್ಗೆ ಮಾತನಾಡುವುದು ಬಿಟ್ಟು ಅದನ್ನು ಡೈವರ್ಟ್ ಮಾಡುವ ಉದ್ದೇಶದಿಂದ ನನ್ನ ವಿವಾದವನ್ನು ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆರ್ ಮದನ್, ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ, ಸಾಲೆಕೊಪ್ಪ ರಾಮಚಂದ್ರ, ಚಂದವಳ್ಳಿ ಸೋಮಶೇಖರ್, ಹೆದ್ದೂರು ನವೀನ್, ಶ್ರೀನಿವಾಸ್ ಕಾಸರವಳ್ಳಿ, ಕವಿರಾಜ್ ಬೇಗುವಳ್ಳಿ ಸೇರಿದಂತೆ ಪ್ರಮುಖರು ಆಗಮಿಸಿದ್ದರು.
ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?
HOW TO APPLY : NEET-UG COUNSELLING 2023