ಕಡ್ತೂರು ಮೋಹನ್ ಅವರಿಗೆ ‘ರಾಜ್ಯ ಸಹಕಾರಿ ರತ್ನ’ ಪ್ರಶಸ್ತಿ
– 4 ದಶಕಗಳ ಸಹಕಾರ ಸೇವೆಗೆ ಸಂದ ಫಲ: ಶುಭಾಶಯಗಳ ಮಹಾಪೂರ
– ಶಿಕ್ಷಣ, ಸಾಮಾಜಿಕ, ಸಂಘ ಸಂಸ್ಥೆಗಳಲ್ಲಿ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಹಿರಿಯ ಸಹಕಾರಿಗಳೂ, ಸಹಕಾರಿ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿರುವ ಸಾಧಕರೂ ಆದ ಕಡ್ತೂರು ಮೋಹನ್ ಅವರು ಈ ಸಾಲಿನ ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಗಲಕೋಟೆಯಲ್ಲಿ ಜರುಗಿದ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಸಹಕಾರಿ ಸಾಧಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಲಾಯಿತು.
ಕಡ್ತೂರು ಮೋಹನ್ 1993 ರಿಂದ 1995ರವರೆಗೆ ಕಡ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. 1995ರಿಂದ ಈವರೆಗೂ ಸತತವಾಗಿ 30 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿ ಸಂಸ್ಥೆಯ ಪ್ರಗತಿಯಲ್ಲಿ ಬಹಳ ಪ್ರಾಮುಖ್ಯತೆ ವಹಿಸಿದ್ದಾರೆ. ಸಂಸ್ಥೆಯ ಸಂಪೂರ್ಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇತ್ತೀಚಿಗೆ ನೂತನ ಕಟ್ಟಡ, ವಾಣಿಜ್ಯ ಮಳಿಗೆ ಉದ್ಘಾಟನೆಗೊಂಡಿದೆ.
ಉದ್ಯಮದಿಂದ ಸಹಕಾರ ಕ್ಷೇತ್ರದ ಕಡೆಗೆ
ಸಹಕಾರಿ ನಾಯಕರಾಗಿರುವ ಮೋಹನ್ ಕಡ್ತೂರು ಸಹಕಾರಿ ಕ್ಷೇತ್ರಗಳಲ್ಲಿ ಸುಮಾರು 4 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡ್ತೂರು ಪ್ರೈಮರಿ ಶಾಲೆಯಲ್ಲಿ ಮಾಡಿ, ಕಮ್ಮರಡಿ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮಾಡಿದ್ದಾರೆ. ಪಿಯುಸಿಯನ್ನು ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಮಾಡಿದ್ದು, ಬಿಎ ಡಿಗ್ರಿಯನ್ನು ಮಹಾರಾಜ ಕಾಲೇಜು ಮೈಸೂರು, ಸ್ನಾತಕೋತ್ತರ ಪದವಿಯನ್ನು ಮಾನಸ ಗಂಗೋತ್ರಿ ಸೈಕಾಲಜಿ ವಿಭಾಗದಲ್ಲಿ ಮಾಡಿರುತ್ತಾರೆ. ಬಳಿಕ ಶಾರದಾ ವಿಲಾಸ ಕಾಲೇಜಿನಲ್ಲಿ ಎಲ್.ಎಲ್.ಬಿ ಮಾಡಿದ್ದು 12 ವರ್ಷಗಳ ಕಾಲ ಶಿವಮೊಗ್ಗ ಬಾರ್ ಕೌನ್ಸಿಲ್ ನಲ್ಲಿ ಪ್ರಾಕ್ಟೀಸ್ ಮಾಡಿ, ಬಳಿಕ ಸಣ್ಣ ಕೈಗಾರಿಕೆಯನ್ನು ಶುರು ಮಾಡಿರುವ ಇವರು ನ್ಯಾಷನಲ್ ಇಂಜಿನಿಯರಿಂಗ್ ವರ್ಕ್ಸ್ ಮೂಲಕ ಹತ್ತು ವರ್ಷಗಳ ಕಾಲ ತಮ್ಮ ಉದ್ಯಮವನ್ನು ಮಾಡಿದ್ದಾರೆ.
ಸಹಕಾರ ಕ್ಷೇತ್ರಕ್ಕೆ ತಂದೆ, ಸಹೋದರನ ಪ್ರೇರಣೆ
ಶಿವಮೊಗ್ಗದಲ್ಲಿ ಉದ್ಯಮದ ಬಳಿಕ ತಮ್ಮ ತಂದೆಯ ಪ್ರೇರಣೆಯೊಂದಿಗೆ ಮತ್ತು ಗ್ರಾಮೀಣ ಭಾಗದ ಸೇವೆ ಸಲ್ಲಿಸುವ ಸಲುವಾಗಿ ಸಹಕಾರಿ ನಾಯಕ ಹಾಗೂ ಮಾಜಿ ಒಕ್ಕಲಿಗ ಸಂಘದ ಅಧ್ಯಕ್ಷ ದಿವಂಗತ ಶ್ರೀನಿವಾಸ ಗೌಡ ಅವರ ಪ್ರೇರಣೆಯೊಂದಿಗೆ ಮತ್ತೆ ಹುಟ್ಟೂರಿಗೆ ಬರುತ್ತಾರೆ. ಹತ್ತು ವರ್ಷಗಳ ಕಾಲ ಸಹಕಾರಿ ಕ್ಷೇತ್ರಗಳಲ್ಲಿ 1993ರಿಂದ ನಿರ್ದೇಶಕರಾಗಿ ಮೊದಲ ಬಾರಿಗೆ ಸಹಕಾರಿ ಕ್ಷೇತ್ರಗಳಲ್ಲಿ 1995ರಲ್ಲಿ ಸೊಸೈಟಿ ಅಧ್ಯಕ್ಷರಾಗಿ ಸೇವೆಯನ್ನು ಶುರು ಮಾಡುತ್ತಾರೆ. ಸುಮಾರು 30 ವರ್ಷಗಳ ಕಾಲ ಸಹಕಾರಿ ಕ್ಷೇತ್ರಗಳಲ್ಲಿ ದುಡಿದ ಇವರು ತೀರ್ಥಹಳ್ಳಿ ಟಿಎಪಿ ಸಿ ಎಮ್ ಎಸ್ ಅಧ್ಯಕ್ಷರಾಗಿ, 10 ಬಾರಿ ನಿರ್ದೇಶಕರಾಗಿ, 12 ವರ್ಷ ಶರಾವತಿ ಸಹಕಾರಿ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ , ಶಿವಮೊಗ್ಗ ಜಿಲ್ಲೆಯ ಒಕ್ಕಲಿಗ ಸಂಘದಲ್ಲಿ 12 ವರ್ಷಗಳ ಕಾಲ ನಿರ್ದೇಶಕರಾಗಿ, ತೀರ್ಥಹಳ್ಳಿ ಕೃಷಿಕ ಸಮಾಜದಲ್ಲಿ 18 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ, ಸಾಮಾಜಿಕ, ಸಂಘ ಸಂಸ್ಥೆಗಳಲ್ಲಿ ಸೇವೆ
ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಮಾಡಿರುವ ಇವರು ಸದ್ದಿಲ್ಲದೇ ತಮ್ಮ ಸೇವೆ ಮುಂದುವರಿಸಿದ್ದಾರೆ. ಕಮ್ಮರಡಿ ಜೆ ಸಿ ಐ ಸ್ಥಾಪಕ ಕಾರ್ಯದರ್ಶಿ ಆಗಿರುತ್ತಾರೆ. ಜೊತೆಗೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.
ಸರ್ವರಿಗೂ ಧನ್ಯವಾದ ಅರ್ಪಿಸಿದ ಮೋಹನ್
ತಮ್ಮ ಈ ಸಾಧನೆಗೆ ಸಹಕರಿಸಿರುವಂತಹ ಸೊಸೈಟಿಯ ಷೇರುದಾರರು, 30 ವರ್ಷಗಳ ಕಾಲ ಅಧಿಕಾರ ಮಾಡಿರುವಂತಹ ಎಲ್ಲಾ ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು,
ಸಹಕಾರಿ ನಾಯಕರಗಳಾದ ಡಾ.ಆರ್ ಎಂ ಮಂಜುನಾಥ್ ಗೌಡರು, ಸಹಕಾರ ನಾಯಕರಾದ ವಿಜಯ್ ದೇವ್ ಬಸವಾನಿ ಮತ್ತು ಈ ಪ್ರಶಸ್ತಿ ಬರಲು ಕಾರಣರಾದಂತಹ ಕಾಂಗ್ರೆಸ್ ನಾಯಕಿ ಡಾ.ಆರತಿ ಕೃಷ್ಣ, ಹಾಗೂ ಸಹಕಾರಿ ಸಚಿವರಾದ ರಾಜಣ್ಣ, ಸಹಕರಿಸಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಲ್ಲಾ ಸಚಿವರು, ತೀರ್ಥಹಳ್ಳಿಯ ಎಲ್ಲಾ ನಾಯಕರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನನಗೆ ಪ್ರೇರಣೆ.. ಜವಾಬ್ದಾರಿ ಹೆಚ್ಚಿದೆ
ಪ್ರಶಸ್ತಿ ನನಗೆ ಮತ್ತಷ್ಟು ಪ್ರೇರಣೆಯನ್ನು ನೀಡಿದೆ. ಸಹಕಾರಿ ಕ್ಷೇತ್ರಗಳಲ್ಲಿ ದುಡಿಯುವ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚಿಸಿದೆ. ತಮ್ಮೆಲ್ಲರಿಗೂ ಅಭಿನಂದನೆಗಳು ಎಂದು ಮೋಹನ್ ಅವರು ತಿಳಿಸಿದ್ದಾರೆ.
ಕುಟುಂಬದ ಸಹಕಾರದೊಂದಿಗೆ ಸಾಧನೆ
ಕಡ್ತೂರು ಸಹಕಾರ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗೆ ಮೋಹನ್ ಅವರ ತಂದೆ ನಾಗಪ್ಪ ಗೌಡ, ತಾಯಿ ಬಿ. ಆರ್ ಹಾಲಮ್ಮ ಅವರ ಪಾತ್ರ ಮಹತ್ವವಾದುದು. ಜತೆಗೆ ಸಹಕಾರ ಮತ್ತು ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿರುವ ಪತ್ನಿ ಅನ್ನಪೂರ್ಣ ಮೋಹನ್, ಪುತ್ರರಾದ ಶಾಶ್ವತ್, ಶರದ್, ಶಶಾಂಕ್ ಅವರ ಸಹಕಾರ ಕೂಡ ಪ್ರಮುಖವಾಗಿದೆ.
ಶಾಶ್ವತ್ ಅವರು ಅಮೆರಿಕದಲ್ಲಿ ಓರಾಕಲ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಶರದ್ ಹಾಗೂ ಶಶಾಂಕ್ ಉನ್ನತ ಶಿಕ್ಷಣ ಪಡೆದು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಡ್ತೂರು ಮೋಹನ್ ಅವರಿಗೆ ಸಹಕಾರ ಪ್ರಮುಖರು, ಪ್ರಮುಖರು, ಮುಖಂಡರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಮೋಹನ್ ಅವರ ಸಂಪರ್ಕ ಸಂಖ್ಯೆ : 7676601689