ಲಾಡ್ಜಲ್ಲಿ ಯುವತಿಯ ಬರ್ಬರ ಕೊಲೆ: ಇನ್ನು ನಿಗೂಢ!
– ದಾಖಲೆ ಇಲ್ಲದೇ ಲಾಡ್ಜ್ ರೂಂ ಕೊಟ್ಟ ಸಿಬ್ಬಂದಿ
– ಹಣಗೆರೆ ಕಟ್ಟೆ ಕೊಲೆ ಹಿಂದೆ ನೂರೆಂಟು ಅನುಮಾನ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಹಣಗೆರೆ ಕಟ್ಟೆ ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯದ ಸಮೀಪ ಯುವತಿಯೊಬ್ಬಳ ಹತ್ಯೆಯಾಗಿದೆ. ಆದ್ರೆ ಇನ್ನು ಕೊಲೆ ಏಕೆ ನಡೆದಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂದು ಕಡೆ ಈ ಹಿಂದೆಯು ಹಲವು ಸಲ ಸ್ಥಳೀಯರು ಹೇಳಿಕೊಂಡ ದೂರಿನಂತೆ ಇಲ್ಲಿನ ಕೆಲವು ಲಾಡ್ಜ್ಗಳು ಅಕ್ರಮ ಚಟುವಟಿಕೆಗೆ ಆಸ್ಪದ ಮಾಡಿಕೊಡುತ್ತಿವೆ ಎಂಬ ದೂರಿತ್ತು. ಅಲ್ಲದೆ ಮಾದಕ ವಸ್ತುಗಳ ಮಾರಾಟ ಈ ಭಾಗದಲ್ಲಿ ನಡೆಯುತ್ತಿವೆ ಎಂಬ ಊರು ಮನೆಯವರ ಆರೋಪಗಳಿಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಯುವತಿಯೊಬ್ಬಳ ಹತ್ಯೆಯಾಗಿದ್ದು ಘಟನೆ ನಡೆದು ಸುಮಾರು ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆ ಮಾಡಿ ಓರ್ವ ಪರಾರಿ!
ಹಣಗೆರೆ ಕಟ್ಟೆಯ ಲಾಡ್ಜ್ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಆತಂಕವನ್ನು ಜೊತೆಗಿಟ್ಟುಕೊಂಡೇ ಎಲ್ಲ ಕಡೆಗಳಲ್ಲಿ ಹರಿದಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಲಾಡ್ಜ್ವೊಂದರ ಕೋಣೆಯಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳ ನಡುವೆ ಯುವತಿಯ ಶವ ಅಸ್ತವ್ಯಸ್ತವಾಗಿ ಬಿದ್ದಿರುವುದು ಕಂಡು ಬಂದಿದೆ. ಶವ ಕೊಳೆತ ಸ್ಥಿತಿಯಲ್ಲಿತ್ತು. ಪೊಲೀಸ್ ಮಹಜರ್ಗೆ ಸಾಕಷ್ಟು ಸಮಯ ಹಿಡಿದಿತ್ತು, ಇದಕ್ಕೆ ಕಾರಣ ಲಾಡ್ಜ್ನಲ್ಲಿ ಯಾವೊಂದು ಸುಳಿವು ಸಿಗದಿರುವುದು. ಯುವತಿಯ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬ ಆಕೆಯ ಕತ್ತು ಸೀಳಿ ಕೊಂದು, ಮಾರಕಾಸ್ತ್ರವನ್ನು ನೀರಿನಲ್ಲಿ ಹಾಕಿ, ಕೈ ಕಾಲು ತೊಳೆದುಕೊಂಡು ಅಲ್ಲಿಂದ ಹೋಗಿದ್ದ. ಇದ್ಯಾವುದು ಲಾಡ್ಜ್ನ ಮಾಲೀಕರಿಗೆ ತಿಳಿದಿಲ್ಲ.
ದಾಖಲೆ ಇಲ್ಲದೇ ಲಾಡ್ಜ್ ರೂಂ ಕೊಟ್ಟ ಸಿಬ್ಬಂದಿ!
ಪ್ರಾಥಮಿಕ ಹಂತದಲ್ಲಿ ಯುವಕ ಮತ್ತು ಯುವತಿ ಲಾಡ್ಜ್ಗೆ ಬಂದು ರೂಂ ಮಾಡಿದ್ದಾರೆ. ಅವರಿಂದ ಯಾವುದೇ ದಾಖಲೆಗಳನ್ನ ಪಡೆಯದ ಸಿಬ್ಬಂದಿ ಕೋಣೆ ನೀಡಿದ್ದಾರೆ. ಆನಂತರ ಅವರ ಇರುವಿಕೆಯ ಬಗ್ಗೆಯು ವಿಚಾರಿಸಿಲ್ಲ. ನಿನ್ನೆ ಕೆಟ್ಟ ವಾಸನೆ ಹೊರಬಂದ ಹಿನ್ನೆಲೆ ಪರಿಶೀಲಿಸಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಇನ್ನೂ ಯುವತಿ ಯಾರು? ಎಲ್ಲಿಯುವಳು ಎಂಬುದು ಸಹ ಗೊತ್ತಾಗಿಲ್ಲ. ಇದರ ಬಗ್ಗೆ ಪೊಲೀಸ್ ಟೀಂ ಪರಿಶೀಲನೆ ನಡೆಸ್ತಿದೆ.
ವಿಧಿ ವಿಜ್ಞಾನ ಇಲಾಖೆ ಸಿಬ್ಬಂದಿ ದೌಡು!
ಇನ್ನೂ ವಿಧಿ ವಿಜ್ಞಾನ ಇಲಾಖೆಯ ಸಿಬ್ಬಂದಿ ತಂಡ ಸ್ಥಳಕ್ಕೆ ಬಂದಿದ್ದು ಸಾಕ್ಷ್ಯಗಳನ್ನು ಕಲೆಹಾಕಿದೆ. ಮೇಲ್ನೋಟಕ್ಕೆ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಂದಲೂ ಸಾಧ್ಯವಾಗುತ್ತಿಲ್ಲ. ನಡೆದ ಘಟನೆಯ ಕ್ಲೂಗಳು ಇಲ್ಲದಿರುವುದರಿಂದ ಪೊಲೀಸ್ ಅಧಿಕಾರಿಗಳು ಲಾಡ್ಜ್ ಮಾಲೀಕರ ಬೇಜವಾಬ್ದಾರಿತನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.