ತೀರ್ಥಹಳ್ಳಿ ಶ್ರೀರಾಮಚಂದ್ರಾಪುರ ಮಠದಲ್ಲಿ ಧರ್ಮ ಸಭೆಗೆ ಸಜ್ಜು
– ನ.23ರಂದು ಕಾಂಚೀ ಮಠದ ಶ್ರೀಗಳ ಆಗಮನ
– ನ.24ಕ್ಕೆ ಮಠದಲ್ಲಿ ಧರ್ಮ ಸಭೆ: ವಿಶೇಷ ಪ್ರವಚನ
NAMMUR EXPRESS NEWS
ತೀರ್ಥಹಳ್ಳಿ: ಶ್ರೀಕಾಂಚೀ ಕಾಮಕೋಟಿ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ನವೆಂಬರ್ 23ರಂದು ಶ್ರೀರಾಮಚಂದ್ರಾಪುರ ಮಠದ ತೀರ್ಥಹಳ್ಳಿ ಶಾಖೆಗೆ ಚಿತ್ತೈಸಿ, ವಸತಿ ಮಾಡಿ ಸಪರಿವಾರ ಶ್ರೀಚಂದ್ರಮೌಳೀಶ್ವರ ದೇವರ ಪೂಜೆಯನ್ನು ಸಂಪನ್ನಗೊಳಿಸಲಿದ್ದಾರೆ. ನವೆಂಬರ್ 24ರ ಅಪಾರಹ್ನ 3.30ಕ್ಕೆ ನಡೆಯಲಿರುವ ಧರ್ಮಸಭೆಗೆ ಈಗಾಗಲೇ ಮಠ ಸಜ್ಜುಗೊಂಡಿದೆ.
ಸಾವಿರಾರು ಭಕ್ತರು ಧರ್ಮ ಸಭೆಗೆ ಆಗಮನ
ತೀರ್ಥಹಳ್ಳಿ ಶ್ರೀ ರಾಮಚಂದ್ರಾಪುರ ಮಠದ ದೇವಾಲಯ ಸಂಪೂರ್ಣ ಸಿಂಗಾರಗೊಳ್ಳುತ್ತಿದೆ. ಈಗಾಗಲೇ ತೀರ್ಥಹಳ್ಳಿಯ ರಥಬೀದಿ ಸಂಭ್ರಮದಲ್ಲಿ ಕಳೆ ಕಟ್ಟಿದೆ. ಭಕ್ತರು ಹಾಗೂ ಹತ್ತು ವಲಯಗಳ ಪ್ರಮುಖರು ಇಲ್ಲಿ ಸೇರಿದ್ದಾರೆ. ತೀರ್ಥರಾಜಪುರ ವಲಯದ ತೀರ್ಥಹಳ್ಳಿ, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ಭಾಗದ ಸಾವಿರಾರು ಭಕ್ತರು ಈ ಧರ್ಮ ಸಭೆಗೆ ಆಗಮಿಸಲಿದ್ದಾರೆ. ಶಂಕರಾಚಾರ್ಯರು ಸ್ಥಾಪನೆ ಮಾಡಿದ ಈ ಮಠ 36 ನೇ ಶ್ರೀಗಳಾದ ಶ್ರೀ ರಾಘವೇಂದ್ರ ಶ್ರೀಗಳ ನೇತೃತ್ವದಲ್ಲಿ ಈ ಧರ್ಮಸಭೆ ನಡೆಯಲಿದೆ. ಶನಿವಾರ ಸಂಜೆ 7:00ಗೆ ಕಂಚಿ ಮಠದ ಶ್ರೀಗಳು ಆಗಮಿಸಲಿದ್ದಾರೆ. ರಥಬೀದಿಯಲ್ಲಿ ಅದ್ದೂರಿ ಸ್ವಾಗತ ನಡೆಯಲಿದೆ. ಮಠದಲ್ಲಿಯೇ ವಾಸ್ತವ್ಯ ಹುಡಲ್ಲಿದ್ದಾರೆ. ಭಾನುವಾರ ಧರ್ಮಸಭೆ ನಡೆಯಲಿದ್ದು ಸರ್ವರನ್ನು ಮಠ ಸ್ವಾಗತಿಸಿದೆ.
ಅಚ್ಚರಿ ಎಂದರೆ ಜೂನ್ 28, 29 1993 ರಲ್ಲಿ ಇದೇ ಸ್ಥಳದಲ್ಲಿ ಧರ್ಮಸಭೆ ನಡೆದಿದ್ದು, ಆ ಧರ್ಮಸಭೆಯಲ್ಲಿ ಕೂಡ ಕಂಚಿ ಮಠ ಶ್ರೀ ಸೇರಿ ಮೂರು ಮಠದ ಶ್ರೀಗಳು ಹಾಜರಿದ್ದರು.
ಸರ್ವರಿಗೂ ಸ್ವಾಗತಿಸಿದ ಮಠ
ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀಕಾಂಚೀ ಕಾಮಕೋಟಿ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀವಿದ್ಯಾಪೀಠ ಶಕಟಪುರದ ಪೀಠಾಧಿಪತಿಗಳಾದ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳ ಸಾನ್ನಿಧ್ಯವಿರಲಿದೆ.
ಶ್ರೀರಾಮಚಂದ್ರಾಪುರ ಮಠದ ತೀರ್ಥಹಳ್ಳಿ ಶಾಖೆಯಲ್ಲಿ ಸಂಪನ್ನವಾಗಲಿರುವ ಅತ್ಯಂತ ಅಪರೂಪದ ವಿಶೇಷವಾದ ದಿವ್ಯಾರಾಧನೆಯನ್ನು, ದಿವ್ಯಸಾನ್ನಿಧ್ಯವನ್ನು ಕಣ್ದುoಬಿಕೊಂಡು ದಿವ್ಯಾನುಗ್ರಹ, ದಿವ್ಯಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಶ್ರೀರಾಮಚಂದ್ರಾಪುರ ಮಠ ಶಾಸನತಂತ್ರದ ಸರ್ವಪದಾಧಿಕಾರಿಗಳು, ಹವ್ಯಕ ಮಹಾಮoಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀರಾಮಚಂದ್ರಾಪುರ ಮಠದ ತೀರ್ಥಹಳ್ಳಿ ಶಾಖೆಯ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.