ಕುಪ್ಪಳಿ ಸಮೀಪದ ಗಡಿಕಲ್ ಸರ್ಕಾರಿ ಶಾಲೆಗೆ 100 ವರ್ಷದ ಸಂಭ್ರಮ!
– ಆಲೆಮನೆ ಶಾಲೆಯ ಶತಮಾನೋತ್ಸವದ ಅಂಗವಾಗಿ ಸಿದ್ದತಾ ಸಭೆ
– ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ತನು-ಮನ-ಧನ ನೀಡಿ ಸಹಕರಿಸಿ: ಸರ್ವರಿಗೂ ಸ್ವಾಗತ
NAMMUR EXPRESS NEWS
ಕೊಪ್ಪ/ತೀರ್ಥಹಳ್ಳಿ: ಕೊಪ್ಪ ತೀರ್ಥಹಳ್ಳಿ ಗಡಿಯ ಕೊಪ್ಪ ತಾಲ್ಲೂಕು, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್ ನಲ್ಲಿರುವ ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಶಾಲೆಯಾಗಿ ಗುರುತಿಸಲ್ಪಟ್ಟಿದೆ. ಇದೀಗ ಈ ಶಾಲೆಗೆ 100 ವರ್ಷದ ಸಂಭ್ರಮ.
ಈ ಶಾಲೆಯಲ್ಲಿ ವಿದ್ಯೆ ಕಲಿತವರು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ, ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಮಾನಗಳಿಗೆ ಪಾತ್ರವಾಗಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಿರೇಕೊಡಿಗೆ, ಕುಂಬಾರಕೊಪ್ಪ, ಬೆಕ್ಕನೂರು ಹಾಗೂ ಗುಣವಂತೆ ಗ್ರಾಮಗಳ ಹಿರಿಯರ ಶೈಕ್ಷಣಿಕ ಪ್ರೇಮಕ್ಕೆ ಸಾಕ್ಷಿಯಾಗಿರುವ ಈ ಶಾಲೆ 1905ರ ಸುಮಾರಿಗೆ ಆರಂಭವಾಯಿತು. ಗ್ರಾಮಸ್ಥರೇ ದೇಣಿಗೆ ನೀಡಿ ನಿರ್ಮಿಸಿದ ಕಟ್ಟಡದಲ್ಲಿ ಆರಂಭವಾದ ಶಾಲೆ ನಂತರ 1915ರಲ್ಲಿ ಮಿಷನ್ ಸ್ಕೂಲ್ ಆಗಿ ಗುರುತಿಸಲ್ಪಟ್ಟಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಶಾಲೆ ಸೂರ್ಯದೇವಸ್ಥಾನ, ಮೊದಲಕೊಪ್ಪ, ಸ್ಕೂಲ್ ಮಕ್ಕಿಗಳಿಗೆ ಸ್ಥಳಾಂತರಗೊಂಡಿದ್ದು ಇತಿಹಾಸ, 1915ರಲ್ಲಿ ಅಧಿಕೃತವಾಗಿ ಸರ್ಕಾರಿ ಶಾಲೆಯೆಂದು ಘೋಷಿಸಲ್ಪಟ್ಟ ಈ ಶಾಲೆ ಸರಿಸುಮಾರು 110 ವರ್ಷಗಳನ್ನು ಪೂರೈಸಿದ್ದರೂ, ಶಾಲೆ ಆರಂಭದ ನಿಖರ ಮಾಹಿತಿಗಳು ಲಭ್ಯವಾಗಿರದ ಕಾರಣ ಶತಮಾನೋತ್ಸವ ಆಚರಿಸುವ ಸಂದರ್ಭ ಒದಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರಕಟಗೊಂಡ ಮಾನ್ಯಶ್ರೀ ಅಲಿಗೆ ಎ.ಆರ್. ಗುರುರವರ ‘ಹೊರಬೈಲು ಮನೆತನದ ಆಯ್ದ ದಾಖಲೆಗಳು’ ಪುಸ್ತಕದಲ್ಲಿ ಶಾಲೆ ಆರಂಭದ ನಿಖರ ಮಾಹಿತಿಗಳು ಲಭ್ಯವಾಗಿದ್ದರಿಂದ ಸ್ಥಳೀಯ ಗ್ರಾಮಸ್ಥರು, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಈಗಲಾದರೂ ಶಾಲೆಯ ಶತಮಾನೋತ್ಸವ ಆಚರಿಸಬೇಕೆಂಬ ಸಂಕಲ್ಪದೊಂದಿಗೆ ಫೆಬ್ರವರಿ 10 ಅಥವಾ 11ರಂದು ಅರ್ಥಪೂರ್ಣವಾಗಿ ಶಾಲಾ ಶತಮಾನೋತ್ಸವವನ್ನು ಆಚರಿಸುವ ತೀರ್ಮಾನ ಮಾಡಿರುತ್ತಾರೆ. ಕಳೆದೊಂದು ಶತಮಾನಗಳ ಕಾಲ ಹಿರೇಕೊಡಿಗೆಯಂತಹ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಕ್ರಾಂತಿಯನ್ನುಂಟುಮಾಡಿ ಸಹಸ್ರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ ಈ ಜ್ಞಾನದೇಗುಲದ ಶತಮಾನೋತ್ಸವವನ್ನು ಚರಿತ್ರೆಯಲ್ಲಿ ದಾಖಲಾಗುವಂತೆ ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಆ ಸವಿನೆನಪಿನಲ್ಲಿ ಶಾಲೆಯನ್ನು ಸರ್ವತೋಮುಖ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿರುವ ಮಹನೀಯರಾದ ತಾವು / ತಮ್ಮ ತಂದೆ / ತಾಯಿ ಈ ಶಾಲೆಯ ಹಳೇ ವಿದ್ಯಾರ್ಥಿಗಳಾಗಿದ್ದು, ತಾವುಗಳು ಈ ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ತನು-ಮನ-ಧನ ರೂಪದಲ್ಲಿ ಉದಾರ ಸಹಕಾರ ನೀಡಿ ಶತಮಾನೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕಾಗಿಶಾಲಾ ಆಡಳಿತ ಸಮಿತಿ, ಶತಮಾನೋತ್ಸವ ಆಚರಣೆ ಸಮಿತಿ ಮನವಿ ಮಾಡಿದೆ.
ಎಲ್ಲಾ ಹಳೆಯ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರಿಗೆ ಸ್ವಾಗತ