ತೀರ್ಥಹಳ್ಳಿ ತಹಸೀಲ್ದಾರ್ ಸಾವಿನ ಬಗ್ಗೆ ತನಿಖೆ!
– ಸಂಶಯಾಸ್ಪದ ಸಾವಿನ ತನಿಖೆ ಚುರುಕು
– ಮರಣೋತ್ತರ ಪರೀಕ್ಷೆ ಪೂರ್ಣ, ವರದಿ ಬಾಕಿ
NAMMUR EXPRESS NEWS
ಬೆಂಗಳೂರು: ತೀರ್ಥಹಳ್ಳಿ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡರ್ (54) ಸಾವಿನ ಸಂಬಂಧ ಗುರುವಾರ ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಬಹುತೇಕ ವರದಿ ಪ್ರಕಾರ ಹೃದಯಘಾತ ಎಂದಾದರೂ ಪೊಲೀಸ್ ತನಿಖೆ ನಡೆಯುತ್ತಿದೆ.
ಗಾಂಧಿನಗರದ ವೈಭವ್ ಲಾಡ್ಜ್ನ ಮೊದಲ ಮಹಡಿ ಕೊಠಡಿಯಲ್ಲಿ ಜಕ್ಕನಗೌಡರ್ ಮೃತದೇಹ ಬುಧವಾರ ರಾತ್ರಿ ಪತ್ತೆಯಾಗಿತ್ತು. ಮೃತ ಜಕ್ಕನಗೌಡರ್ ಅವರ ಪುತ್ರಿ ರಂಜಿತಾ ಅವರು ನೀಡಿರುವ ದೂರು ಆಧರಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಹೃದಯಾಘಾತದಿಂದ ಜಕ್ಕನಗೌಡರ್ ಮೃತಪಟ್ಟಿರುವ ಶಂಕೆಯಿದೆ. ಜಕ್ಕನಗೌಡರ್ ಅವರ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಜಕ್ಕನಗೌಡರ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೂರ್ಣಗೊಳಿಸಲಾಗಿದೆ. ಜಕ್ಕನಗೌಡರ್ ಮೊಬೈಲ್ ತನಿಖೆ ಸಲುವಾಗಿ ವಶಕ್ಕೆ ಪಡೆಯಲಾಗಿದೆ. ಹಲವು ಆಯಾಮಗಳಲ್ಲಿತನಿಖೆ ನಡೆಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
– ಲೊಕೇಶನ್ ನೀಡಿದ ಸುಳಿವು!
ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಕೆಲಸವಿದ್ದ ಕಾರಣ ತಹಸೀಲ್ದಾರ್ ಜಕ್ಕನಗೌಡರ್ ಅ.14ರಂದು ಬೆಂಗಳೂರಿಗೆ ಬಂದಿದ್ದರು. ವೈಭವ್ ಲಾಡ್ಜ್ನಲ್ಲಿಅವರ ಹೆಸರಿನಲ್ಲಿಯೇ ಮೊದಲ ಮಹಡಿಯ ಕೊಠಡಿ ಬಾಡಿಗೆ ಪಡೆದು ಉಳಿದುಕೊಂಡಿದ್ದರು. ಅ.15ರ ರಾತ್ರಿಯಿಂದ ಅವರ ಮೊಬೈಲ್ ರಿಂಗ್ ಆಗುತ್ತಿದ್ದರೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಹಾಗೂ ಕುಟುಂಬಸ್ಥರು ತೀರ್ಥಹಳ್ಳಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಶಿವಮೊಗ್ಗ ಪೊಲೀಸರು ಜಕ್ಕನಗೌಡರ್ ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದಾಗ ಗಾಂಧಿನಗರ ತೋರಿಸುತ್ತಿತ್ತು. ಈ ಮಾಹಿತಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಹಂಚಿಕೊಂಡಿದ್ದರು. ಈ ಮಾಹಿತಿ ಪಡೆದು ಗಾಂಧಿನಗರದ ಹಲವು ಲಾಡ್ಜ್ಗಳನ್ನು ಶೋಧಿಸಿದಾಗ ರಾತ್ರಿ 8.30ರ ಸುಮಾರಿಗೆ ವೈಭವ್ ಲಾಡ್ಜ್ನಲ್ಲಿ ಜಕ್ಕನಗೌಡರ್ ಮೊಬೈಲ್ ಲೊಕೇಶನ್ ಸ್ಥಳ ದೃಢಪಟ್ಟಿತ್ತು. ಬಳಿಕ ಜಕ್ಕನಗೌಡರ್ ಉಳಿದುಕೊಂಡಿದ್ದ ಕೊಠಡಿಗೆ ತೆರಳಿದಾಗ ಒಳಗಡೆಯಿಂದ ಡೋರ್ ಲಾಕ್ ಆಗಿತ್ತು. ಈ ನಿಟ್ಟಿನಲ್ಲಿ ನಗರದಲ್ಲಿಯೇ ಉಳಿದುಕೊಂಡಿದ್ದ ಅವರ ಪುತ್ರಿ ರಂಜಿತಾ ಹಾಗೂ ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿಯೇ ಲಾಡ್ಜ್ ಬಾಗಿಲು ತೆರೆದಾಗ ಮಂಚದ ಮೇಲೆ ಜಕ್ಕನಗೌಡರ್ ಮೃತಪಟ್ಟಿರುವುದು ಕಂಡು ಬಂದಿತ್ತು. ಅವರ ಮೊಬೈಲ್ ಕೂಡ ಅಲ್ಲಿಯೇ ಇತ್ತು. ಕುಟುಂಬಸ್ಥರ ಎದುರಲ್ಲೇ ಮಹಜರು ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಗದಗ ಮೂಲದ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡರ್ಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಪುತ್ರಿ ರಂಜಿತಾ ನಗರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಇಲ್ಲಿಯೇ ಉಳಿದಿದ್ದಾರೆ. ಮತ್ತೊಬ್ಬ ಮಗಳು ಹಾಗೂ ಪತ್ನಿ ತೀರ್ಥಹಳ್ಳಿಯಲ್ಲಿದ್ದರು ಎಂಬ ವಿಚಾರ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಹುಟ್ಟೂರಲ್ಲಿ ಅಂತ್ಯ ಸಂಸ್ಕಾರ ನಡೆದಿದೆ.