ಅಂಗನವಾಡಿಗೆ ಬರುತ್ತಿಲ್ವಾ ಆಹಾರ, ಧಾನ್ಯ..!?
– ಮನೆಯಿಂದಲೇ ಬಾಕ್ಸ್ ತರಲು ಸಲಹೆ
– ಮಕ್ಕಳ ಸ್ಥಿತಿ ಪರದಾಟ: ಏನಿದು ಅವ್ಯವಸ್ಥೆ
– ಕೆಲವು ಕಡೆ ಅತಿಯಾದ ಸರಬರಾಜು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಇನ್ನೂ ಅಂಗನವಾಡಿಯಿಂದ ಸಿಕ್ಕಿಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಲವು ಕಡೆ ಮಕ್ಕಳಿಗೆ ಮಧ್ಯಾಹ್ನದ ಆಹಾರವಿಲ್ಲದೇ ಮನೆಯಿಂದಲೇ ಬಾಕ್ಸ್ ತರಲು ಸಲಹೆ ನೀಡಿದ್ದು,ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಗರ್ಭಿಣಿ- ಬಾಣಂತಿಯರಿಗೆ ಆಹಾರ ನೀಡಲಾಗುತ್ತಿತ್ತು. ಆದರೆ ಅಂಗನವಾಡಿಗೆ ಆಹಾರ ಧಾನ್ಯ ಬಾರದ ಹಿನ್ನೆಲೆ ಸಂಕಷ್ಟ ಎದುರಾಗಿದೆ. ಹೆಚ್ಚಿನ ಅಂಗನವಾಡಿಯಲ್ಲಿ ಆಹಾರವೇ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡಲಾಗುತ್ತಿದ್ದ ವೇತನವು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯಾಗಬಾರದು, ಬೆಳೆಯುತ್ತಿರುವ ಮಕ್ಕಳ ಆರೋಗ್ಯ ಮುಖ್ಯ,ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಉದ್ದುದ್ದ ಭಾಷಣವನ್ನು ಕೇವಲ ಮೈಕ್ನಲ್ಲಿ ಮಾತ್ರ ಕೇಳುತ್ತೇವೆ ವಿನಃ ಇಂತಹ ಮಕ್ಕಳ, ಮಹಿಳೆಯರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಒಟ್ಟಿನಲ್ಲಿ ಮಕ್ಕಳಿಗೆ, ಅಂಗನವಾಡಿಕಾರ್ಯಕರ್ತೆಯರಿಗೆ,ಗರ್ಭಿಣಿ-ಬಾಣಂತಿಯರಿಗೆ ಆಗಿರುವ ಸಮಸ್ಯೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು, ಸರ್ಕಾರ ಇನ್ನಾದರೂ ಕೂಡಲೇ ಸ್ಪಂದಿಸಬೇಕಾಗಿದೆ.