ಆರ್.ಎಸ್.ಬಿ ಸಭಾ ಭವನ ಲೋಕಾರ್ಪಣೆಗೆ ಸಜ್ಜು!
* ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ ಕಟ್ಟಡ ಉದ್ಘಾಟನೆ
* ಗೋವಾ ಕೈವಲ್ಯ ಮಠಾಧೀಶರಿಂದ ಲೋಕಾರ್ಪಣೆ: ಹಣ ಸಂಗ್ರಹದಲ್ಲಿ ಸುರಭಿ ಅಶೋಕ್ ನಾಯಕ್ ವಿಶೇಷ ಸೇವೆ
* ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವ್ಯವಸ್ಥಿತ ಮಂದಿರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯಲ್ಲಿ ಆರ್.ಎಸ್.ಬಿ. ಸಮುದಾಯ ರಂಜದಕಟ್ಟೆ ವಿಶ್ವೇಶ್ವರ ಕಾಮತ್ ಸ್ಮರಣಾರ್ಥ ನಿರ್ಮಿಸಿರುವ ಆರ್.ಎಸ್.ಬಿ. ಸಭಾಭವನ ಉದ್ಘಾಟನೆಗೆ ಸಜ್ಜಾಗಿದೆ. ತೀರ್ಥಹಳ್ಳಿಯ ಇತರೆ ಸಮುದಾಯಭವನಗಳಿಗೆ ಹೋಲಿಸಿದರೆ ಅತ್ಯಂತ ವಿಶಾಲ ಹಾಗೂ ಆಧುನಿಕ ಸೌಲಭ್ಯ ಹೊಂದಿರುವ ಸಮುದಾಯ ಭವನ ಎಂಬ ಖ್ಯಾತಿ ದೊರಕಲಿದೆ. ಅಲ್ಲದೆ ಈ ಸಮುದಾಯ ಭವನದ ಗಾತ್ರಕ್ಕೆ ತಕ್ಕ ಹಾಗೆ ವಿಶಾಲವಾದ ಪಾರ್ಕಿಂಗ್ ಆವರಣ ಕೂಡ ದೊರಕಲಿರುವುದರಿಂದ ಮುಂದೆ ಸಮುದಾಯ ಭವನ ಜನಪ್ರಿಯಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಅಂತಿಮ ಸಿದ್ಧತೆಗಳು ಶುರುವಾಗಿದೆ.
ಆರ್.ಎಸ್.ಬಿ ಸಭಾ ಭವನದ ಲೋಕಾರ್ಪಣೆಗೆ ಸಜ್ಜು
ಅ.23ಕ್ಕೆ ತೀರ್ಥಹಳ್ಳಿ ಪುತ್ತಿಗೆ ಮಠದ ಸಮೀಪ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಸಮಾಜದ ಹೆಮ್ಮೆಯ ಹಿಂದುಳಿದ ಸಮುದಾಯದ ನೂತನ ಕಟ್ಟಡ ಇದಾಗಿದೆ. 2000ರಲ್ಲಿ ಸಣ್ಣ ಕಟ್ಟಡದ ಮುಖಾಂತರ ಪ್ರಾರಂಭವಾದ ಕನಸು ಇದೀಗ ಮೊಳಕೆಯೊಡೆದು ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವ್ಯವಸ್ಥಿತ ಮಂದಿರ ನಿರ್ಮಾಣವಾಗಿದೆ. ಗೋವಾ ಕೈವಲ್ಯ ಮಠಾಧೀಶರಿಂದ ಲೋಕಾರ್ಪಣೆ ನಡೆಯಲಿದೆ.
ಸುರಭಿ ಅಶೋಕ್ ಅವರಿಂದ ದಾನಿಗಳ ಸಂಪರ್ಕ
ಆರ್.ಎಸ್.ಬಿ. ಅಥವಾ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಸಮುದಾಯದವರು ಒಂದುಗೂಡಿ ಇಂತಹ ಒಂದು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಕನಸಿಗೆ ಮುಂದಡಿ ಇಟ್ಟಿದ್ದು ದಿವಂಗತ ರಾಮಚಂದ್ರ ಬೋರ್ಕರ್ ಮುಂದಾಳತ್ವದಲ್ಲಿ ಪ್ರಸ್ತುತ ಅವರ ಪತ್ನಿ ಸುಮಾ ರಾಮಚಂದ್ರ ಅಧ್ಯಕ್ಷರು ಹಾಗೂ ಇದಕ್ಕೆ ಬೇಕಾದ ಎಲ್ಲ ರೀತಿಯ ಬೆಂಬಲ ಹಾಗೂ ನೈತಿಕ ಬಲ ತುಂಬಿದ್ದು ಖ್ಯಾತ ಉದ್ಯಮಿ ರಂಜದಕಟ್ಟೆ ನಟರಾಜ್ ಕಾಮತ್ ಹಾಗೂ ಎಲ್ಲರ ನಡುವೆ ಸಮನ್ವಯ ಸಾಧಿಸಿ ಅಪಾರ ಶೃದ್ದೆಯಿಂದ ಸಮಾಜದ ದಾನಿಗಳ ಬಳಿ ಸಾಗಿ ಅವರ ಮನವೊಲಿಸಿದ್ದು ಯುವ ಉದ್ಯಮಿ ಸುರಭಿ ಅಶೋಕ್. ಜತೆಗೆ ಸಂಘದ ಎಲ್ಲಾ ಸದಸ್ಯರ ಶ್ರಮದಿಂದ ಇಂದು ದೊಡ್ಡ ಕಟ್ಟಡ ನಿರ್ಮಾಣವಾಗಿದೆ. ಅಶೋಕ್ ಅವರು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಧನ ಸಹಾಯ ಮಾಡಿದ್ದಾರೆ. ಅಲ್ಲದೆ ಅನೇಕ ದಾನಿಗಳನ್ನು ಭೇಟಿ ಮಾಡಿ ಧನ ಸಹಾಯ ಮಾಡಿಸಲು ಸಮಿತಿ ಜತೆ ಕೈ ಜೋಡಿಸಿದ್ದಾರೆ.
ಸುಂದರ ಕಾರ್ಯಕ್ರಮಕ್ಕೆ ಸಿದ್ಧತೆ
ಸಂಸದ ಬಿ ವೈ ರಾಘವೇಂದ್ರ ತಮ್ಮ ಸಂಸದ ನಿಧಿಯಿಂದ 50 ಲಕ್ಷ ರೂಗಳ ಮೊತ್ತ ನೀಡಿದ್ದು ಹಾಗೂ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಎಲ್ಲ ಸಹಕಾರ ನೀಡಿದ್ದನ್ನು ಕೂಡ ಸಮಿತಿ ಸ್ಮರಿಸಿತು. ಅಕ್ಟೋಬರ್ 21 ರ ಸಂಜೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು 22ರ ಬೆಳಿಗ್ಗೆ 8.20ರಿಂದ ವಿಶ್ವನಾಥ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 23ರ ಬೆಳಿಗ್ಗೆ 10.30ಕ್ಕೆ ಗೋವಾ ಕೈವಲ್ಯ ಮಠದ ಶ್ರೀ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನಾ ಕಾರ್ಯ ಆರಂಭಗೊಳ್ಳಲಿದೆ. ಅಧ್ಯಕ್ಷತೆಯನ್ನು ಸುಮಾ ರಾಮಚಂದ್ರ ವಹಿಸಲಿದ್ದು ಗೌರವ ಉಪಸ್ಥಿತಿ ನಟರಾಜ್ ಕಾಮತ್ ಹಾಗೂ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯತಿ ಅಧ್ಯಕ್ಷ ಟಿ.ರೆಹಮತ್ ಉಲ್ಲಾ ಅಸಾದಿ, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ.ವೆಂಕಟೇಶ್, ಉದ್ಯಮಿ ಸದಾನಂದ ನಾಯಕ್ ಪುನಾ, ದಕ್ಷಿಣ ಕನ್ನಡ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಗೀತಾಂಜಲಿ ಟೆಕ್ಸ್ಟೈಲ್ಸ್ನ ಸಂತೋಷ್ ವಾಗ್ಲೆ, ಪುತ್ತೂರು ಸರಸ್ವತಿ ಸೌಹಾರ್ದ ಸಹಕಾರಿ ಅಧ್ಯಕ್ಷ ಸತೀಶ್ ಚಂದ್ರ ಎಸ್.ಆರ್., ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಶಾಂತರಾಮ ಪ್ರಭು ಸೇರಿ ಎಲ್ಲಾ ಸಮಿತಿ ಸದಸ್ಯರು ಉಪಸ್ಥಿತಿ ಇರಲಿದ್ದಾರೆ.