ರಾಘವೇಂದ್ರ ಅಧಿಕೃತ ಪ್ರಚಾರ ತೀರ್ಥಹಳ್ಳಿಯಲ್ಲಿ ಶುರು!
– ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಸಭೆ
– 1000ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಯಕರ್ತರು ಭಾಗಿ
– ಬಿಜೆಪಿ ಗೆಲ್ಲೋದು ಪಕ್ಕಾ ಎಂದ ರಾಘವೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶನಿವಾರ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಅಧಿಕೃತ ಪ್ರಚಾರ ಶುರುವಾಗಿದೆ. ತೀರ್ಥಹಳ್ಳಿಯ ದರಲಗೋಡಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾದ ಆರಗ ಮಹಾ ಶಕ್ತಿ ಕೇಂದ್ರದ ಸಭೆಗೆ ಆಗಮಿಸಿ ಅಲ್ಲಿ ಮಾತನಾಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಮೊದಲನೆಯ ಕಾರ್ಯಕ್ರಮವನ್ನು ಇಂದು ಮಾತೃಶಕ್ತಿ ಸಮಾವೇಶದ ಮುಖಾಂತರ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಮ್ಮ ನಾಯಕ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಡೆಸುತ್ತಿದ್ದೇವೆ.ಈ ಬಾರಿಯ ಚುನಾವಣೆ ಯಾವುದೇ ಗ್ಯಾರಂಟಿ ಅಥವಾ ಯಾವೊಬ್ಬ ವ್ಯಕ್ತಿಯನ್ನು ಎಂಪಿ ಮಾಡಲು ನಡೆಯುತ್ತಿರುವಂತಹ ಚುನಾವಣೆ ಅಲ್ಲ. ಈ ಬಾರಿಯ ಚುನಾವಣೆ ದೇಶದ ಭವಿಷ್ಯವಾಗಿದೆ. ದೇಶದ ಪ್ರಜೆಗಳ ಭವಿಷ್ಯವನ್ನು ಕಣ್ಣು ಮುಂದೆ ಇಟ್ಟುಕೊಂಡು, ಹಿಂದುತ್ವಕ್ಕೆ ಹೆಚ್ಚು ಶಕ್ತಿಯನ್ನು ಈ ಚುನಾವಣೆಯಲ್ಲಿ ತುಂಬುವಂತ ಕೆಲಸವನ್ನು ಇಟ್ಟುಕೊಂಡು ಹಾಗೂ ಈ ಭಾಗದ ಬಡವರ, ಮಹಿಳೆಯರ, ಯುವಕರ ಹಾಗೂ ರೈತರ ಶ್ರೇಯಾಭಿವೃದ್ಧಿಗೋಸ್ಕರ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು.
ಸ್ವಾತಂತ್ರ್ಯ ಬಂದು 2047 ನೇ ಇಸವಿಗೆ 100 ವರ್ಷ ತುಂಬುತ್ತಿರುವಂತ ಈ ಸಂದರ್ಭದಲ್ಲಿ ವಿಕಸಿತ ಭಾರತ ಆಗಬೇಕು, ಅದರ ಮುಖಾಂತರ ಈ ನಾಡಿನ ಪ್ರಜೆಗಳ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವಂತಹ ಚುನಾವಣೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ನಾವು ಮಾಡುತ್ತಿದ್ದೇವೆ. ವಿಶೇಷವಾಗಿ ತೀರ್ಥಹಳ್ಳಿ ಕ್ಷೇತ್ರ ಒಂದು ರಾಷ್ಟ್ರೀಯ ವಿಚಾರಗಳಲ್ಲಿ ಭಾವನಾತ್ಮಕವಾದ ಸಂಬಂಧಗಳನ್ನು ಇಟ್ಟುಕೊಂಡಿರುವುದು ಈ ಪವಿತ್ರವಾದ ಮಣ್ಣಿನ ಗುಣ. ಅನೇಕ ಹಿರಿಯ ರಾಜಕಾರಣಿಗಳನ್ನು ಕೊಟ್ಟಂತ ಒಂದು ಕ್ಷೇತ್ರ ಇದಾಗಿದೆ. ದೌರ್ಭಾಗ್ಯ ಎಂದರೆ ನಮ್ಮ ಜಿಲ್ಲೆಯಲ್ಲಾಗುತ್ತಿರುವಂತಹ ರಾಜಕಾರಣ, ಸಭೆ ಸಮಾರಂಭಗಳಲ್ಲಿ ವಿರೋಧ ಪಕ್ಷಗಳು ತಮ್ಮ ವಿಚಾರಗಳನ್ನು ಮಂಡಿಸಲು ವಿಚಾರ, ಸಿದ್ಧಾಂತ, ಒಂದು ಅಭಿವೃದ್ಧಿಯ ಗುರಿ ಯಾವುದು ಇಲ್ಲದ ಕಾರಣ ವಿರೋಧ ಪಕ್ಷಗಳು ಟೀಕೆ ಮಾಡುವುದೇ ಒಂದು ಪ್ರಚಾರ ಎಂದುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದೆ ಎಂದರು.
5 ಲಕ್ಷಕ್ಕಿಂತ ಹೆಚ್ಚಿನ ರೈತ ಕುಟುಂಬಗಳಿಗೆ ಕಳೆದ ಆರು ತಿಂಗಳಿನಿಂದ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಎಲ್ಲಾ ಪ್ರಜ್ಞಾವಂತ ಮತದಾರರು ಇದನ್ನು ಗಮನಿಸುತ್ತಿದ್ದಾರೆ, ಯಾವುದೇ ವೈಯಕ್ತಿಕ ಟಿಕೆ ಟಿಪ್ಪಣಿಗಳು ನಡೆದರೆ ಅದು ಚುನಾವಣೆಯಲ್ಲ. ನಮ್ಮ ಮೋದಿಜಿ ಅವರ ನೇತೃತ್ವದಲ್ಲಾದಂತಹ ಅಭಿವೃದ್ಧಿಯ ಕೆಲಸ, ನಮ್ಮ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಆದಂತಹ ತೀರ್ಥಹಳ್ಳಿಯ ಅಭಿವೃದ್ಧಿ ಕೆಲಸಗಳನ್ನು ನಾವು ಕಣ್ಣ ಮುಂದೆ ಇಟ್ಟುಕೊಂಡು ಈ ಬಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಾವು ಚುನಾವಣೆಯನ್ನು ಎದುರಿಸಲಿದ್ದೇವೆ. ತೀರ್ಥಹಳ್ಳಿ ಕ್ಷೇತ್ರ ವ್ಯಕ್ತಿಗಿಂತ ಪಕ್ಷ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಚಿಂತನೆ ಮಾಡುವಂತಹ ಮತದಾರರು ಇದ್ದಾರೆ. ಈ ಬಾರಿ ನೂರಕ್ಕೆ ನೂರು ದೇಶದ ಹಿತ ದೃಷ್ಟಿಯಿಂದ ಮೋದಿಜಿಯವರಿಗೆ ಸುಮಾರು ಒಂದು ಕಾಲು ಲಕ್ಷಕ್ಕಿಂತ ಹೆಚ್ಚಿನ ಮತವನ್ನು ನಮ್ಮ ತೀರ್ಥಹಳ್ಳಿ ಕ್ಷೇತ್ರದ ಜನ ಬಿಜೆಪಿಗೆ ನೀಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಕಿರಣ್, ರಾಜ್ಯದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ಭದ್ರಾವತಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಗಾಯತ್ರಿ, ಪ್ರಧಾನ ಕಾರ್ಯದರ್ಶಿ ಮಂಗಳ ನಾಗೇಂದ್ರ, ತೀರ್ಥಹಳ್ಳಿ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋಧ ಮಂಜುನಾಥ್, ಮಹಿಳಾ ಘಟಕದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷರಾದ ಶೈಲಾ ನಾಗರಾಜ್, ಜೆಡಿಎಸ್ ಜಿಲ್ಲಾ ಪದಾಧಿಕಾರಿ ಚಂದ್ರಕಲಾ, ಹೆದ್ದೂರು ನವೀನ್ ಸೇರಿ ಹಲವರು ಇದ್ದರು.