ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕ ರಾಮಪ್ಪ ಚಲುವಾದಿ
– ನಿವೃತ್ತ ಶಿಕ್ಷಕ ರಾಮಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ
– ಭಾರತೀಪುರ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಭಾರತೀಪುರದಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ರಾಮಪ್ಪ ಚಲುವಾದಿಯವರು ಡಿ.31ರಂದು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಹೊಸನಗರದ ಕವರಿ ಕಿರಿಯ ಪ್ರಾಥಮಿಕ ಪಾಠಶಾಲೆಯಿಂದ ವೃತ್ತಿ ಜೀವನ ಆರಂಭಿಸಿದ ಶ್ರೀಯುತ ರಾಮಪ್ಪ ಚಲುವಾದಿಯವರು ಇಪ್ಪತ್ತೈದು ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಸಹ ಶಿಕ್ಷರಾಗಿ ವೃತ್ತಿಗೆ ಪಾದಾರ್ಪಣೆ ಮಾಡಿರುತ್ತಾರೆ. ಹೊಸನಗರ, ಮೇಗರವಳ್ಳಿ ಹಾಗೂ ಭಾರತೀಪುರದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
‘ಈ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಶ್ರಮವಹಿಸಿದ್ದು ಎಷ್ಟೋ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿದ್ದಾರೆ. ಆ ಬಗ್ಗೆ ನನಗೆ ಹೆಮ್ಮೆಇದೆ’ ಎಂದು ಅವರ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ರಾಮಪ್ಪ ಚಲವಾದಿ ಮಾತನಾಡಿದರು.
ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಡಿ.30 ರಂದು ಭಾರತೀಪುರದ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು, ಶಾಲೆಯ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು, ರಾಮಪ್ಪ ಚಲುವಾದಿಯವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಶಿಕ್ಷಕರ ಸಂಘದ ಮಹಾಬಲೇಶ್ವರ ಹೆಗಡೆಯವರು ಮಾತನಾಡಿ, ಇಪ್ಪತ್ತೈದು ವರ್ಷಗಳ ಸುದೀರ್ಘ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದು ಸೇವೆಗೆ ಕೃತಜ್ಞತೆ ಸಲ್ಲಿಸಿ, ನೆನಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಅವರ ನಿವೃತ್ತ ಜೀವನ ಶುಭಕರವಾಗಿರಲೆಂದು ನಮ್ಮೂರ್ ಎಕ್ಸ್ಪ್ರೆಸ್ ಹಾರೈಸುತ್ತದೆ.