ತೀರ್ಥಹಳ್ಳಿಯಲ್ಲಿ ಸಂತೋಷ್ ಲಾಡ್ ಬೆಂಕಿ ಭಾಷಣ!
– ರೋಡ್ ಶೋ ನಡೆಯಲಿಲ್ಲ…ಗೀತಾ, ಶಿವಣ್ಣ ಹಾಜರ್
– ಗಾಂಧಿ ಚೌಕದಲ್ಲಿ ಸಾವಿರಾರು ಜನರ ಜೋಷ್
– ಬಾರದ ನಟ ನಟಿಯರು: ರೋಡ್ ಶೋ ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ರೋಡ್ ಶೋ ಕೊನೆಗೆ ಶಿವರಾಜ್ ಕುಮಾರ್ ಹಾಗೂ ಸಚಿವ ಸಂತೋಷ್ ಲಾಡ್ ಭಾಷಣದ ಮೂಲಕ ಅಂತ್ಯಗೊಂಡಿತು. ಕಾಂಗ್ರೆಸ್ ಕಾರ್ಯಕರ್ತರು, ಎನ್ ಎಸ್ ಯು ಐ ಕಾರ್ಯಕರ್ತರು ಭಾರೀ ಮೆರವಣಿಗೆಯಲ್ಲಿ ಸೀಬಿನಕೆರೆಯಿಂದ ಗಾಂಧಿ ಚೌಕದವರೆಗೆ ಕರೆ ತಂದು ಅಲ್ಲಿ ಭಾರೀ ಹೂಮಳೆ ಸುರಿಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಭಾಷಣಕ್ಕೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆದರು. ಮೋದಿ ಅವರ ಯೋಜನೆಗಳು, ಅವರ ಹೇಳಿಕೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ವಿವರವಾಗಿ ಬಯಲು ಸೀಮೆ ಹಾಗೂ ಹಿಂದಿ ಭಾಷೆಯಲ್ಲಿ ಹೇಳುವ ಮೂಲಕ ಸಾವಿರಾರು ಜನರನ್ನು ಅರ್ಧ ಗಂಟೆ ಸೆಳೆದರು. ಬಳಿಕ ಮಾತನಾಡಿದ ಅಭ್ಯರ್ಥಿ, ಗೀತಾ ಶಿವರಾಜ್ ಕುಮಾರ್, ನನಗೆ ಒಂದು ಅವಕಾಶ ಕೊಡಿ. ನಿಮ್ಮೆಲ್ಲರ ಸೇವೆಗೆ ನಾನು ಬದ್ಧ. ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು. ಕಿಮ್ಮನೆ ರತ್ನಾಕರ್, ಡಾ. ಮಂಜುನಾಥ್ ಗೌಡ, ಶೃಂಗೇರಿ ಶಾಸಕ ರಾಜೇಗೌಡ, ಮುಡುಬ ರಾಘವೇಂದ್ರ ಸೇರಿ ಹಲವರು ಇದ್ದರು.
ಸಂತೋಷ್ ಲಾಡ್ ಭಾಷಣಕ್ಕೆ ಜನರ ಚಪ್ಪಾಳೆ!
ಸಚಿವ ಸಂತೋಷ್ ಲಾಡ್ ಮಾತನಾಡಿ, ಮೋದಿ ಒಬ್ಬ ಸುಳ್ಳುಗಾರ. ಕಾಂಗ್ರೆಸ್ ಏನೂ ಮಾಡಿಲ್ಲ ಅಂತ ಅಧಿಕಾರಕ್ಕೆ ಬಂದು 10 ವರ್ಷ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಅಂಬಾನಿ, ಅದಾನಿಗೆ ಹಣ ಮಾಡಿಕೊಡಲು ಜನರಿಗೆ ಬರೆ ಹಾಕಿದ್ದಾರೆ. ಪ್ರತಿ ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ದೇಶದಲ್ಲಿ ಸುಳ್ಳು ಭಾಷಣ ಬಿಟ್ಟರೆ ಬೇರೇನೂ ಮಾಡಿಲ್ಲ. ಐಪಿಎಲ್ ಬೆಟ್ಟಿಂಗ್, ಡ್ರಗ್ಸ್, ಮಾಫಿಯಾದಿಂದ ಹಣ ಮಾಡುತ್ತಿದ್ದಾರೆ. ಅವರಿಗೆ ಇದ್ಯಾವುದು ಗೊತ್ತೇ ಇಲ್ವಾ? ಎಂದು ಬೆಂಕಿ ಭಾಷಣ ಮಾಡಿ ಕಾಂಗ್ರೇಸ್ ಕಾರ್ಯಕರ್ತರನ್ನೇ ಪ್ರಶ್ನೆ ಮಾಡುತ್ತಾ ಜೋಷ್ ತುಂಬಿದರು.
ಸಿದ್ದರಾಮಯ್ಯ ರಾಜ್ಯದಲ್ಲಿ ಬಡವರಿಗೆ ಹಲವು ಯೋಜನೆ ಕೊಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 60 ವರ್ಷ ಆಳಿ ಊಟಕ್ಕಿಲ್ಲದ ಹಂತದಿಂದ ದೇಶವನ್ನು ಯುದ್ಧ, ಅಭಿವೃದ್ಧಿ ಎಲ್ಲವನ್ನು ಮಾಡಿದೆ. ಆದರೆ ಬಿಜೆಪಿ ಹಾಗೂ ಮೋದಿ ಅವರು, ಪಾಕಿಸ್ತಾನ, ಮುಸ್ಲಿಂ, ತಾಲಿಬಾನ್ ಅಂತ ಇಲ್ಲಿ ಕೋಮು ದ್ವೇಷ ಬಿತ್ತಿ ತನ್ನ ರಾಜಕೀಯ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಗಮನ ಸೆಳೆದ ಶಿವಣ್ಣ!
ಬಡವರು, ಶ್ರೀಮಂತ ಅಂತ ಬೇಧ ಭಾವ ಬೇಡ, ಎಲ್ಲರೂ ಹಾರ್ಟ್ ಅಲ್ಲಿ ಪ್ರೀತಿಸಬೇಕು. ರಾಘವೇಂದ್ರ ಅವರಿಗೆ ಅವಕಾಶ ಕೊಟ್ಟಿದ್ದೀರಿ. ಗೀತಾಳಿಗೆ ಒಮ್ಮೆ ಅವಕಾಶ ಕೊಡಿ. ಅವಳಿಗೆ ನಾನು ಗ್ಯಾರಂಟಿ. ಮೇ 7ಕ್ಕೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿ ತಮ್ಮ ಡೈಲಾಗ್ ಮತ್ತು ಹಾಡಿನ ಮೂಲಕ ಗಮನ ಸೆಳೆದರು.
ಬಾರದ ಚಿತ್ರ ನಟ ನಟಿಯರು!
ಖ್ಯಾತ ಚಲನ ಚಿತ್ರ ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಬಾಲಾಜಿ ಹಾಗೂ ಅನೇಕ ಚಿತ್ರನಟರು ಈ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಬೇಕಿತ್ತು. ಆದರೆ ರಿಪ್ಪಿನಪೇಟೆ ಹಾಗೂ ಹೊಸನಗರ ಕಾರ್ಯಕ್ರಮಗಳು ತಡವಾದ ಕಾರಣ ಬರಲಿಲ್ಲ.