ತೀರ್ಥಹಳ್ಳಿ: ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರಿಗೆ ಗೌರವ ಅಭಿನಂದನಾ ಸಮಾರಂಭ..!
– ತಾಲೂಕಿನ 43 ಶಾಲೆಗಳಲ್ಲಿ 39 ಶಾಲೆಗಳಿಗೆ ಎ ಗ್ರೇಡ್: ಅಭಿನಂದನೆ
– ತೀರ್ಥಹಳ್ಳಿ ಶಿಕ್ಷಣ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಆರಗ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಜೂನ್ 24ರ ಸೋಮವಾರ ತಾಲೂಕು ಪಂಚಾಯಿತಿ ನೂತನ ಸಭಾಂಗಣದಲ್ಲಿ ಕಳೆದ ಪರೀಕ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ತಂದುಕೊಟ್ಟ ಪಿಯುಸಿ ಮತ್ತು ಪ್ರೌಢಶಾಲೆಗಳ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರಿಗೆ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರಿಂದ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಈ ತಾಲೂಕಿನಲ್ಲಿ ಫಲಿತಾಂಶ ಬರುವಾಗ ನಾನು ಶಿವಮೊಗ್ಗದಲ್ಲಿದ್ದೆ, ಬಹಳ ಜನ ನನಗೆ ಅಭಿನಂದನೆ ಹೇಳಿದರು. ಏನ್ರೀ ನಿಮ್ಮ ತಾಲೂಕು ಇಷ್ಟು ಒಳ್ಳೆ ರಿಸಲ್ಟ್ ಕೊಟ್ಟಿದೆ ಎಂದು ಹೇಳಿದರು. ನಾನು ಅದಕ್ಕೆ ಹೇಳಿದೆ ನಮ್ಮ ತಾಲೂಕಿನ ಎಲ್ಲ ಶಿಕ್ಷಕರ ಪ್ರಯತ್ನದಿಂದ ಈ ರಿಸಲ್ಟ್ ಬಂದಿದೆ ಎಂದು ಹೇಳಿದೆ. 43 ಶಾಲೆಗಳಲ್ಲಿ 39 ಶಾಲೆಗಳಿಗೆ ಎ ಗ್ರೇಡ್ ಬಂದಿದೆ ಇದು ಹೆಮ್ಮೆ ಪಡುವ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಗೆ ತೀರ್ಥಹಳ್ಳಿ ನಂಬರ್ 1
ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್ ಮಾತನಾಡಿ, ನಮ್ಮ ತಾಲೂಕು ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, 97.85% ಫಲಿತಾಂಶವನ್ನು ತಾಲೂಕು ಪಡೆದಿದೆ. ಈ ಫಲಿತಾಂಶದಿಂದ ತಾಲೂಕಿಗೆ ಹೆಮ್ಮೆಯನ್ನು ತಂದಿರುವಂತಹ ಎಲ್ಲಾ ಶಿಕ್ಷಕರಿಗೂ ಅಭಿನಂದನೆ ತಿಳಿಸಿದರು.
ತಾಲೂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೈಲಾ ಮಾತನಾಡಿ ಭಾರತೀಯ ಪರಂಪರೆಯಲ್ಲಿ ಶಿಕ್ಷಕರನ್ನು ಉನ್ನತ ಸ್ಥಾನಕ್ಕಿರಿಸಿ ಅವರನ್ನು ಗುರು ಎಂದು ಕರೆಯಲಾಗುತ್ತದೆ, ಅಂತಹ ಗುರುಗಳನ್ನು ಗೌರವಿಸಲು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವಂತಹ ನಮ್ಮ ಹೆಮ್ಮೆಯ ಶಾಸಕ ಜ್ಞಾನೇಂದ್ರ ಅವರಿಗೆ ಧನ್ಯವಾದಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅರಗ ಜ್ಞಾನೇಂದ್ರ, ತಹಶೀಲ್ದಾರ್ ಜಕ್ಕಣ್ಣ ಗೌಡರ್, ತಾಲೂಕು ಪಂಚಾಯಿತಿಯ ಕಾರ್ಯನಿರ್ವಣಾಧಿಕಾರಿ ಶೈಲಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಗಣೇಶ್, ಪ್ರಾಂಶುಪಾಲರಾದ ಸುಧಾ ಹಾಗೂ ಗಣೇಶ್, ಗಿರಿರಾಜ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ನಾಗರಾಜ್ ಶೆಟ್ಟಿ ಹಾಗೂ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯರು ಉಪಸ್ಥಿತರಿದ್ದರು.