ತೀರ್ಥಹಳ್ಳಿ ಪಟ್ಟಣದ ಅಂದಗೆಡಿಸುತ್ತಿರುವ ಜನ!
– ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಜಾಗದಲ್ಲಿ ಗುಟ್ಕಾ, ಎಲೆ ಅಡಿಕೆ ಉಗಿತ
– ರೋಗ ಹರಡುವ ತಾಣವಾದ ಬಸ್ ನಿಲ್ದಾಣಗಳು!
– ಕಣ್ಣುಮುಚ್ಚಿ ಕುಳಿತ ತೀರ್ಥಹಳ್ಳಿ ಪಟ್ಟಣ ಪಂಚಾಯತಿ, ಅರೋಗ್ಯ ಇಲಾಖೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಬಸ್ ನಿಲ್ದಾಣ, ಸಾರ್ವಜನಿಕ ಜಾಗಗಳು, ಸರ್ಕಾರಿ ಕಚೇರಿಗಳು ಜನ ಸಾಮಾನ್ಯರು ಹೆಜ್ಜೆ ಇಡುವಾಗ ಯೋಚನೆ ಮಾಡಿ ಹೆಜ್ಜೆ ಇಡುವ ಪರಿಸ್ಥಿತಿ ಎದುರಾಗಿದೆ. ಜನ ಎಲ್ಲೆಂದರಲ್ಲಿ ಗುಟ್ಕಾ ಉಗಿಯುತ್ತಿದ್ದಾರೆ. ಅದರ ಮಧ್ಯ ಬಸ್ ಗಾಗಿ ಕಾದು ಕುಳಿತ ಜನ ತೊಂದರೆಗೆ ಸಿಲುಕಿದ್ದಾರೆ. ಬಸ್ ನಿಲ್ದಾಣ ಸುತ್ತಮುತ್ತ ಈ ಗುಟ್ಕಾ ಉಗಿದು ಕೊಳಕು ಪ್ರದೇಶ ನಿರ್ಮಾಣವಾಗಿ ರೋಗ ಹರಡುವ ತಾಣವಾಗಿದೆ. ಇದುವರೆಗೂ ಯಾವುದೇ ರೀತಿಯ ಸ್ವಚ್ಛತಾ ಕಾರ್ಯ ಮತ್ತು ಅಲ್ಲಿ ಉಗಿಯುವವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ.ಇದು ಮತ್ತಷ್ಟು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಸೆಕ್ಷನ್ 328ರ ಅಡಿಯಲ್ಲಿ ಗುಟ್ಕಾ, ಜರ್ದ ಪಾನ್ ಮಸಾಲ, ಎಲೆ ಅಡಿಕೆ ಎಲ್ಲೆಂದರಲ್ಲಿ ಉಗಿಯುವ ಜನರ ಮೇಲೆ ಪೊಲೀಸ್ ಕೇಸ್ ದಾಖಲಿಸಬಹುದಾಗಿದೆ. ಆದರೂ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಅಂತಹ ಪ್ರಕರಣ ವರದಿ ಆಗಿಲ್ಲ. ಕೆಲವು ವಿದ್ಯಾರ್ಥಿಗಳು, ಹಳ್ಳಿಗಳಿಂದ ಬರುವ ಜನ, ಬಯಲು ಸೀಮೆಯಿಂದ ಬರುವ ಜನ, ಪ್ರಯಾಣಿಕರಿಗೆ ಎಚ್ಚರಿಕೆ ಫಲಕ ಅಳವಡಿಸಬೇಕಿದೆ. ತೀರ್ಥಹಳ್ಳಿ ಕೆಲವು ಸಾರ್ವಜನಿಕ ಶೌಚಾಲಯಗಳು ಅವ್ಯವಸ್ಥೆ ಆಗರವಾಗಿದ್ದು ಇತ್ತ ಜನರ ಉಪಯೋಗಕ್ಕೂ ಇಲ್ಲ, ಅದರ ನಿರ್ವಹಣೆ ಇಲ್ಲದೆ ಗಲೀಜು ಆಗಿವೆ. ಈ ಬಗ್ಗೆ ತಕ್ಷಣ ಆಡಳಿತ ಕ್ರಮಕೈಗೊಳ್ಳಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಅಗ್ರಹ.