ತೀರ್ಥಹಳ್ಳಿ ಶಿಕ್ಷಣ ಕ್ಷೇತ್ರದಲ್ಲೂ ರಾಜ್ಯದಲ್ಲಿ ಟಾಪ್!
– ಎನ್ಎಂಎಂಎಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ತೀರ್ಥಹಳ್ಳಿ ಆಗ್ರ ಸ್ಥಾನ
– ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಶಿಕ್ಷಕರ ಶ್ರಮಕ್ಕೆ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೀರ್ಥಹಳ್ಳಿ ತಾಲೂಕಿನ 8 ನೇ ತರಗತಿ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಅರ್ಹತೆ ಪಡೆದು ಜಿಲ್ಲೆಯಲ್ಲೆ ತೀರ್ಥಹಳ್ಳಿ ತಾಲೂಕು ಅಗ್ರಸ್ಥಾನ ಪಡೆದಿದೆ. ಇತ್ತೀಚೆಗೆ ರೋಸ್ಟರ್ ಆಧಾರಿತ ಮೆರಿಟ್ ಅರ್ಹತಾ ಪಟ್ಟಿ ಪ್ರಕಟಗೊಂಡಿದ್ದು ತೀರ್ಥಹಳ್ಳಿ ತಾಲೂಕು ಉತ್ತಮ ಸಾಧನೆ ಮಾಡಿದೆ.</p.
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಅಗ್ರಸ್ಥಾನ ಗಳಿಸಿ, ವಿಷಯವಾರು ಗುಣಮಟ್ಟದ ಅಂಕ ಗಳಿಗೆಯಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿ ಪಡೆದಿರುವ ತೀರ್ಥಹಳ್ಳಿ ತಾಲೂಕಿನ ಶಿಕ್ಷಣ ಇಲಾಖೆ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ತೀರ್ಥಹಳ್ಳಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ರವರು ಪ್ರತಿ ಶಾಲೆಯಲ್ಲಿ ಎಂಟನೇ ತರಗತಿಯ ಅತಿ ಹೆಚ್ಚು ವಿದ್ಯಾರ್ಥಿಗಳಿಂದ ಎನ್ಎಂಎಂಎಸ್ ಪರೀಕ್ಷೆಗೆ ನೋಂದಣಿ ಮಾಡಿಸಿ ಅಕ್ಟೋಬರ್ ,ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪ್ರತಿ ಶನಿವಾರ ತಾಲೂಕಿನ ಸಂಪನ್ಮೂಲ ಪ್ರೌಢಶಾಲಾ ಸಹ ಶಿಕ್ಷಕರಿಂದ ತರಬೇತಿ ಕೊಡಿಸಲು ಯಶಸ್ವಿಯಾಗಿದ್ದರು.
ಎನ್ಎಂಎಂಎಸ್ ಪರೀಕ್ಷೆಗೆ ಆಯ್ಕೆ ಆದ 38 ವಿದ್ಯಾರ್ಥಿಗಳು!
ಎನ್ಎಂಎಂಎಸ್ ಪರೀಕ್ಷೆಗೆ ತೀರ್ಥಹಳ್ಳಿ ತಾಲೂಕಿನ 554 ವಿದ್ಯಾರ್ಥಿಗಳ ನೋಂದಣಿ ಮಾಡಿಸಿದ್ದು 38 ವಿದ್ಯಾರ್ಥಿಗಳು ಎನ್ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಗಳಿಸುವುದರ ಮೂಲಕ ಜಿಲ್ಲೆಯಲ್ಲಿ ಶೇಕಡವಾರು ತೇರ್ಗಡೆಯಲ್ಲಿ ಅಗ್ರಸ್ಥಾನ ಗಳಿಸಿದೆ.
ಮೇಗರವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8 ವಿದ್ಯಾರ್ಥಿಗಳು, ನೊಣಬೂರು ಸರ್ಕಾರಿ ಪ್ರೌಢಶಾಲೆಯ 4 ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆ, ಮಾಳೂರು ಮತ್ತು ಕಟ್ಟೆಹಕ್ಕಲ್ಲಿನ ತಲಾ 3 ವಿದ್ಯಾರ್ಥಿಗಳು, ರಾಷ್ಟ್ರೀಯ ಪ್ರೌಢಶಾಲೆ ಕೋಣಂದೂರು ಹಾಗೂ ಮಂಡಗದ್ದೆ,ಆರಗ, ಕೊಂಡ್ಲೂರು, ತೀರ್ಥಹಳ್ಳಿಯ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನ ತಲಾ 2 ವಿದ್ಯಾರ್ಥಿಗಳು, ತನಿಕಲ್, ಗುಡ್ಡೆಕೊಪ್ಪ, ಕೊಡ್ಲು,ರಾಮಕೃಷ್ಣಾಪುರ, ವಿಶ್ವ ತೀರ್ಥ ಪ್ರೌಢಶಾಲೆ ಕಮ್ಮರಡಿಯ ತಲಾ ಒಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಎನ್ಎಂಎಂಎಸ್ ಪರೀಕ್ಷೆಗೆ ಪ್ರಾಮುಖ್ಯತೆ ಏಕೆ?
ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ ಪರೀಕ್ಷೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರತಿ ವರ್ಷ ಈ ಪರೀಕ್ಷೆಯನ್ನು ಸರ್ಕಾರಿ ಅನುದಾರಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1000 ರೂಪಾಯಿಯಂತೆ ವರ್ಷಕ್ಕೆ 12 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಎನ್ಎಂಎಂಎಸ್ ತಾಲೂಕು ನೋಡಲು ಅಧಿಕಾರಿ ಜ್ಯೋತಿ ಮತ್ತು ತಾಲೂಕಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳು ಮತ್ತು ಸಹ ಶಿಕ್ಷಕರು ವಿದ್ಯಾರ್ಥಿಗಳ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಸಾಧನೆಗೆ ಅಭಿನಂದನೆ
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತಾಲೂಕಿನ ಎಲ್ಲಾ ಶಾಲೆಗಳು ಅತ್ಯುತ್ತಮ ಸಾಧನೆಗೈದಿದ್ದು, ಇದೀಗ ಎಂಎಂಎಸ್ ಪರೀಕ್ಷೆಯಲ್ಲೂ ಸಹ ತಾಲೂಕಿನ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ಈ ಸಾಧನೆಗೆ ಕಾರಣರಾದ ಎಲ್ಲ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರುಗಳನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸುತ್ತೇನೆ.
ಗಣೇಶ್ ,
ಕ್ಷೇತ್ರಶಿಕ್ಷಣಾಧಿಕಾರಿ
ಶಾಲಾ ಶಿಕ್ಷಣ ಇಲಾಖೆ
ತೀರ್ಥಹಳ್ಳಿ