ಟಾಪ್ 3 ನ್ಯೂಸ್ ತೀರ್ಥಹಳ್ಳಿ
– ತೀರ್ಥಹಳ್ಳಿ: ನಾಟಕ ಸ್ಪರ್ಧೆಯಲ್ಲಿ ತುಂಗಾ ಕಾಲೇಜು ಸಾಧನೆ
– ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಜಾತ್ರಾ ಸಮಿತಿ ಕೃತಜ್ಞತೆ
– ಕೋಣಂದೂರು : ಶ್ರೀ ಬನಶಂಕರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ
NAMMUR EXPRESS NEWS
ತೀರ್ಥಹಳ್ಳಿ: ಜ.3ರ ಶುಕ್ರವಾರದಂದು ಸಹ್ಯಾದ್ರಿ ರಂಗ ತರಂಗ (ರಿ), ಶಿವಮೊಗ್ಗ, ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಇವರುಗಳ ಸಹಯೋಗದೊಂದಿಗೆ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಪ್ರಥಮ ದರ್ಜೆ ಹಾಗೂ ಬಿ.ಎಡ್ ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಕುವೆಂಪು ನಾಟಕ ಸ್ಪರ್ಧೆಯಲ್ಲಿ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಆಧಾರಿತ ‘ಅತ್ತಲಾ ಕಿಷ್ಕಂದೆಯೊಳ್” ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಗಳಿಸಿದೆ. ನಾಟಕದ ನಿರ್ದೇಶನ ಮತ್ತು ಸಂಗೀತವನ್ನು ಶ್ರೀಪಾದ ತೀರ್ಥಹಳ್ಳಿ ಹಾಗೂ ಶಿವಕುಮಾರ್ ತೀರ್ಥಹಳ್ಳಿ, ರಂಗಸಜ್ಜಿಕೆ, ಬೆಳಕಿನ ನಿರ್ವಹಣೆ, ಪ್ರಸಾಧನ ಕಲೆಯನ್ನು ಚೇತನ್ ಸಹ್ಯಾದ್ರಿ ಇವರುಗಳ ನಿರ್ವಹಿಸಿದ್ದಾರೆ. ನಾಟಕ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ, ಉತ್ತಮ ಪ್ರಸಾದನ ಹಾಗೂ ಉತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿಯನ್ನೂ ಸಹಗಳಿಸಿದೆ. ನಾಟಕದ ತರಬೇತಿಯನ್ನು ತೀರ್ಥಹಳ್ಳಿಯ ನಟಮಿತ್ರರು ತಂಡ ನಿರ್ವಹಿಸಿದ್ದು ದಿನಾಂಕ ಜ. 8 ರಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳಿಗೆ, ನಟಮಿತ್ರರು(ರಿ) ತೀರ್ಥಹಳ್ಳಿ ತಂಡದ ಅಧ್ಯಕ್ಷರಾದ ಸಂದೇಶ್ ಜವಳಿ, ಹಿರಿಯ ರಂಗಕರ್ಮಿ ಮಾಧೂ ಸುರಾನಿ, ನಾಟಕದ ‘ನೇಪಥ್ಯ ಸಹಾಯಕರಾದ ವಿನಂತಿ ಪೈ, ಕಾರ್ತಿಕ್ ಕುಮಾರ್ ಹಾಗೂ ಹರಿವಿನಾಯಕ್ ಮತ್ತು ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾ ಲಕರಾದ ಡಾ. ಪ್ರಶಾಂತ್ ಇವರಿಗೆ ತುಂಗಾ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
– ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಜಾತ್ರಾ ಸಮಿತಿ ಕೃತಜ್ಞತೆ
ತೀರ್ಥಹಳ್ಳಿ: ಡಿಸೆಂಬರ್ 30, 31, ಜನವರಿ 1ರಂದು ನಡೆದ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಜಾತ್ರಾ ಯಶಸ್ಸಿಗೆ ಸಹಕಾರ ನೀಡಿದ ಸಮಸ್ತ ಭಕ್ತಾದಿಗಳಿಗೆ, ಅರ್ಚಕ ವೃಂದಕ್ಕೆ, ದಾನಿಗಳಿಗೆ, ಜಾತ್ರಾ ವ್ಯಾಪಾರಿಗಳಿಗೆ, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ, ಮಾಧ್ಯಮದವರಿಗೆ, ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಎಲ್ಲಾ ಮಹನೀಯರಿಗೆ ಜಾತ್ರಾ ಉತ್ಸವ ಸಮಿತಿ ಪರವಾಗಿ ಸಂಚಾಲಕರಾದ ಡಾ .ಟಿ.ಎಲ್.ಸುಂದರೇಶ್, ಸೊಪ್ಪುಗುಡ್ಡೆ ರಾಘವೇಂದ್ರ ಕೃತಜ್ಞತೆ ಅರ್ಪಿಸಿ ಸರ್ವರಿಗೂ ಶ್ರೀ ರಾಮೇಶ್ವರ ಸ್ವಾಮಿ ಸನ್ಮಂಗಳ ಉಂಟುಮಾಡಲೆಂದು ಹಾರೈಸಿದ್ದಾರೆ.
– ಕೋಣಂದೂರು : ಶ್ರೀ ಬನಶಂಕರಿ ಜಾತ್ರೆ ಮಹೋತ್ಸವಕ್ಕೆ ಚಾಲನೆ
ಕೋಣಂದೂರು: ಶ್ರೀ ಮಹಾಗಣಪತಿ, ಬನಶಂಕರಿ ದೇವಿ ಜಾತ್ರಾ ಮಹೋತ್ಸವಕ್ಕೆ ರವೀಂದ್ರ ದಂಪತಿಗಳು ಅಕ್ಲಾಪುರ, ಕೆ.ಆರ್.ಸದಾಶಿವ ದಂಪತಿಗಳು ಕೋಣಂದೂರು ಇವರು ಧರ್ಮದರ್ಶಿ ಹೆಚ್.ರಾಮಚಂದ್ರ ಜೋಯಿಸ್ ಹಾಗೂ ಕುಟುಂಬದವರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಜನವರಿ 7 ರಂದು ದೀಪ ಹಚ್ಚುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.