- ದೆಹಲಿಯಲ್ಲಿ 58 ವರ್ಷಗಳಲ್ಲೇ ಅತೀ ಹೆಚ್ಚು ಚಳಿ, ಮಂಜು
ನವ ದೆಹಲಿ: ಒಂದು ಕಡೆ ಕರೋನಾ, ಇನ್ನೊಂದು ಕಡೆ ತಾಪಮಾನ ಏರಿಳಿತ. ಇದು ದೇಶದ ಜನರನ್ನು ಕಂಗೆಡಿಸಿದೆ. ಈ ನಡುವೆ ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತೆ ದಾಖಲೆ ಬರೆದಿದ್ದು, 58 ವರ್ಷಗಳಲ್ಲೇ ಈ ಅಕ್ಟೋಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕರೋನಾ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೊತೆಗೆ ಬದುಕು ಕಷ್ಟಕರವಾಗಲಿದೆ.
ದೆಹಲಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ 17.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೆ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಇದಕ್ಕೂ ಮುನ್ನ 1962ರ ಅಕ್ಟೋಬರ್ನಲ್ಲಿ ದೆಹಲಿಯಲ್ಲಿ ಸರಾಸರಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1937ರ ಅ.31ರಂದು ಇದುವರೆಗಿನ ಕನಿಷ್ಠ ತಾಪಮಾನ ದಾಖಲೆ ಎನ್ನಲಾಗಿರುವ 9.4 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಬಳಿಕ 1994ರಲ್ಲಿ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬಳಿಕ ಅಂಥಹ ಕನಿಷ್ಠ ತಾಪಮಾನ ದೆಹಲಿಯಲ್ಲಿ ದಾಖಲಾಗಿರಲಿಲ್ಲ. ಆದರೆ ಕಳೆದ ಗುರುವಾರ ನಗರದಲ್ಲಿನ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ಗೆ ದಿಢೀರ್ ಕುಸಿತ ಕಂಡಿತ್ತು. ಡಿಸೆಂಬರ್ ಹೊತ್ತಿಗೆ ಮತ್ತಷ್ಟು ತಾಪಮಾನ ಇಳಿಕೆಯಿಂದಾಗಿ ಸ್ಥಳೀಯರಿಗೆ ಶೀತಗಾಳಿಯ ಪರಿಣಾಮ ಅನಾರೋಗ್ಯ ಹೆಚ್ಚುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ವಾರದಿಂದ 10 ದಿನಗಳ ಕಾಲ ದೆಹಲಿಯಲ್ಲಿ ಕನಿಷ್ಠ ತಾಪಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತ ಕರೋನಾ ಏರಿಕೆಯಾಗುವ ಸಾಧ್ಯತೆಯೂ ಇದೆ.