- ದೇಶದಲ್ಲಿ ಬಿಜೆಪಿಗೆ ಜೈ ಎಂದ ಮತದಾರ
- ಐದು ರಾಜ್ಯಗಳ ಪೈಕಿ 4 ಕಡೆ ಅಧಿಕಾರ
- ಪಂಜಾಬ್ ಅಧಿಕಾರದ ಚುಕ್ಕಾಣಿ ಹಿಡಿದ ಆಪ್
- ಕಾಂಗ್ರೆಸ್, ಎಸ್ಪಿ ಪಕ್ಷಗಳಿಗೆ ಮುಖಭಂಗ
NAMMUR EXPRESS NEWS
ಬಹು ನಿರೀಕ್ಷಿತ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ದೇಶದ ಜನ ಮತ್ತೆ ಬಿಜೆಪಿ ಕೈ ಹಿಡಿದಿದ್ದಾರೆ. ಐದು ರಾಜ್ಯಗಳಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆದು, ಫಲಿತಾಂಶ ಬಂದಿದ್ದು ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಪಂಜಾಬ್ ಆಮ್ ಆದ್ಮಿ ಪಾಲಾಗಿದೆ.
ಫಲಿತಾಂಶ ಹಲವಾರು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದ್ದು ಕಾಂಗ್ರೆಸ್ ರಾಷ್ಟ್ರ ನಾಯಕರು, ಮಾಯಾವತಿ, ಅಖಿಲೇಶ್ ಯಾದವ್ ಸೇರಿ ಅನೇಕರ ಭವಿಷ್ಯಕ್ಕೆ ಮಂಕು ತಂದಿದೆ.
ಸಣ್ಣ ಜಾತಿಗಳನ್ನು ಜೋಡಿಸಿಕೊಂಡು ಈ ಬಾರಿ ಅಧಿಕಾರಕ್ಕೆ ಬರುತ್ತೇನೆಂಬ ಛಲದಿಂದ ಮುನ್ನುಗ್ಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಗ್ಗರಿಸಿದ್ದಾರೆ. ಬಿಜೆಪಿಯು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ದಲ್ಲಿ ಮತ್ತೆ ಅಧಿಕಾರ ಹಿಡಿದಿದ್ದು ಎರಡನೇ ಬಾರಿ ಗೆಲುವು ದಾಖಲಾಗಿದೆ.
80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮುಂಬರುವ ಲೋಕ ಸಭಾ ಚುನಾವಣೆಗೆ ಬಿಜೆಪಿಗೆ ಪ್ಲಸ್ ಆಗಿದೆ.
ಉತ್ತರಾಖಂಡ್ನಲ್ಲಿ ಬಿಜೆಪಿ ಮಾಡಿದ ಪ್ರಯೋಗವನ್ನು ಪಂಜಾಬಿನಲ್ಲಿ ಕಾಂಗ್ರೆಸ್ ಮಾಡಿ ಓರ್ವ ದಲಿತ ನಾಯಕ ಚರಣ್ಜಿತ್ ಚನ್ನಿಗೆ ನೇತೃತ್ವ ನೀಡಿ ಕಾಂಗ್ರೆಸ್ ಬಹಳ ನಿರೀಕ್ಷೆ ಮಾಡಿತ್ತು. ಅದು ಹುಸಿಯಾಗಿದೆ.
ಬಿಜೆಪಿ ವಿಜಯೋತ್ಸವ..!
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಜಯೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಮಾತನಾಡಿ ಇದು ಕಾರ್ಯಕರ್ತರ ಗೆಲುವು. ಅಭಿವೃದ್ಧಿಗೆ ಸಿಕ್ಕ ಗೆಲುವು ಎಂದೂ ಬಣ್ಣಿಸಿದರು. ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲೂ ವಿಜಯೋತ್ಸವ ನಡೆಯಿತು.
ಜನಾದೇಶದಲ್ಲಿ ಗೆದ್ದವರಿಗೆ ಶುಭಾಶಯಗಳು
ಕೆಲಸ ಮಾಡಿದ, ಮತ ಹಾಕಿದವರಿಗೆ ಥ್ಯಾಂಕ್ಸ್: ರಾಹುಲ್ ಗಾಂಧಿ
ಚುನಾವಣೆಯಲ್ಲಿನ ಜನರ ತೀರ್ಪನ್ನು ಪಕ್ಷವು ನಮ್ರತೆಯಿಂದ ಸ್ವೀಕರಿಸುತ್ತದೆ ಮತ್ತು ಅದರಿಂದ ಪಾಠ ಕಲಿಯುತ್ತೇವೆ. ದೇಶದ ಜನರ ಹಿತಾಸಕ್ತಿಗಾಗಿ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತದೆ. ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು. ನಾವು ಇದರಿಂದ ಪಾಠ ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಗುರುವಾರ ಪಂಜಾಬ್ನಲ್ಲಿ ಕಾಂಗ್ರೆಸ್ ತನ್ನ ಅತಿದೊಡ್ಡ ಸೋಲನ್ನು ಕಂಡಿತು, ಅಲ್ಲಿ ಹೊಸದಾಗಿ ಪ್ರವೇಶ ಮಾಡಿದ ಆಮ್ ಆದ್ಮಿ ಪಕ್ಷದಿಂದ ಅಧಿಕಾರವನ್ನು ಕಸಿದುಕೊಂಡಿತು. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿಯೂ ಹಿನ್ನಡೆ ಅನುಭವಿಸಿದೆ.
ಪಂಚ ರಾಜ್ಯದಲ್ಲಿ ಬಿಜೆಪಿ ಗೆಲುವು ಕಾರ್ಯಕರ್ತರ ಗೆಲುವು. ಮುಂದಿನ ಲೋಕ ಸಭಾ ಚುನಾವಣೆಯ ಗೆಲುವು ನಮ್ಮದೇ. ಅದಕ್ಕೆ ಇದು ದಿಕ್ಸುಚಿ ಇದು. ಎಲ್ಲರಿಗೂ ಧನ್ಯವಾದಗಳು.
- ನರೇಂದ್ರ ಮೋದಿ, ಪ್ರಧಾನಿ
2023ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ..
ಕಾಂಗ್ರೆಸ್ ಧೂಳಿಪಟವಾದ ಪಕ್ಷ. ಇಡಿ ರಾಷ್ಟ್ರದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ದೇಶದ ಸುಭದ್ರ ಭವಿಷ್ಯಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ತಮ್ಮ ಸಂಘಟನೆಗಾಗಿ ಕೆಲಸ ಮಾಡುತ್ತಿದೆ. 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸೂರ್ಯ, ಚಂದ್ರರಸ್ಟೆ ಸತ್ಯ. ನಾವೆಲ್ಲರೂ ಕೆಲಸ ಮಾಡೋಣ. ಜನರ ಹಿತಕ್ಕಾಗಿ ಶ್ರಮಿಸೋಣ.
- ಬಸವರಾಜ ಬೊಮ್ಮಾಯಿ
ಸಿಎಂ, ಕರ್ನಾಟಕ
ಐದು ರಾಜ್ಯಗಳಿಗೆ ನಡೆದ ವಿಧಾನ ಸಭೆ ಚುನಾವಣೆಗಳಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತಲೇ, ಪಕ್ಷವನ್ನೂ ಯಶಸ್ಸಿನ ಉತ್ತುಂಗಕ್ಕೆ ನಡೆಸಿದ ನರೇಂದ್ರ ಮೋದಿ ಜಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯ ನಾಥ್ ಯೋಗಿಜಿ ಹಾಗೂ ಪಕ್ಷದ ಅಧ್ಯಕ್ಷ ಶ್ರೀ ಜಗತ್ ಪ್ರಕಾಶ್ ನಡ್ಡಾರವರಿಗೂ ಅಭಿನಂದನೆಗಳು.
ಆರಗ ಜ್ಞಾನೇಂದ್ರ
- ಗೃಹ ಸಚಿವ, ಕರ್ನಾಟಕ