ಇಂದು ವಿಶ್ವ ಸಂಗೀತ ದಿನ: ಗಾಯಕರಿಗೆ ನಮ್ಮ ಗೌರವ
– ಶೃತಿ, ತಾಳ, ಲಯದೊಂದಿಗೆ ರಸದೌತಣ: ಜೀವನಕ್ಕೆ ಬೇಕು ಸಂಗೀತ
– ಸಂಗೀತ ಔಷಧವೂ ಹೌದು.. ಸಂಗೀತ ಕೇಳಿ, ಗಾಯಕರಿಗೆ ಸಿಗಲಿ ಅವಕಾಶ
NAMMUR EXPRESS NEWS
ಸಂಗೀತ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಗಾಗಿರುವ ಸಂಗೀತಗಾರರು ಮತ್ತು ಗಾಯಕರನ್ನು ಗೌರವಿಸಲು ಪ್ರತಿವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತವಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಸಂಗೀತವನ್ನು ಇಷ್ಟಪಡದವರೇ ಇಲ್ಲ. ಈ ಕಲೆಯ ಶಕ್ತಿಯನ್ನು ಅರಿಯಲೇ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.
ಫೆಟೆ ಡೆ ಲಾ ಮ್ಯೂಸಿಕ್ ಎಂದೂ ಕರೆಯಲ್ಪಡುವ ಇದನ್ನು ಯುವ ಮತ್ತು ವೃತ್ತಿಪರ ಸಂಗೀತಗಾರರಿಗೆ ತಮ್ಮ ಕಲೆ ಪ್ರದರ್ಶಿಸಲು ಪ್ರೇರೇಪಿಸುವುದಕ್ಕಾಗಿ ಆಚರಿಸಲಾಗುತ್ತದೆ. 120 ಕ್ಕೂ ಹೆಚ್ಚು ದೇಶಗಳು ವಿಶ್ವ ಸಂಗೀತ ದಿನವನ್ನು ಆಚರಿಸುತ್ತವೆ. ಮತ್ತು ಈ ವಿಶೇಷ ದಿನದಂದು ಸಂಗೀತ ಪ್ರಿಯರು ವಿಭಿನ್ನ ಸಂಗೀತ ಕಚೇರಿಗಳನ್ನು ಉದ್ಯಾನವನಗಳು, ಕ್ರೀಡಾಂಗಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿ ಈ ದಿನವನ್ನು ಆಚರಿಸುತ್ತವೆ.
ಸಂಗೀತ ದಿನದ ಮಹತ್ವ!
ಎಲ್ಲಾ ಸಂಗೀತ ಪ್ರಿಯರಿಗೆ ಉಚಿತ ಸಂಗೀತ ಕೂಟವನ್ನು ಉಣ್ಣಬಡಿಸುವ ಮತ್ತು ಹವ್ಯಾಸಿ, ವೃತ್ತಿಪರ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಸಂಗೀತದ ಮಹತ್ವವನ್ನು ಮತ್ತು ಅದು ಮಾನವನ ಮನಸ್ಸು ಮತ್ತು ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಈ ದಿನ ಎತ್ತಿ ತೋರಿಸಲಾಗುತ್ತದೆ. ಅನೇಕ ಅಧ್ಯಯನಗಳು ಮತ್ತು ತಜ್ಞರು ಹೇಳುವ ಪ್ರಕಾರ ಸಂಗೀತವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನಮ್ಮ ಮನಸ್ಸಿಗೆ ಶಾಂತಿ, ಉಲ್ಲಾಸ ನೀಡಿ ಮುಂದೆ ಸಾಗಲು ಸಹಾಯ ಮಾಡುತ್ತದೆ. ಇನ್ನು ಸಂಗೀತ ಚಿಕಿತ್ಸೆಯು ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಅದ್ಭುತಗಳನ್ನು ಮಾಡಿದೆ. ಹಿತವಾದ ಸಂಗೀತ ಜನರಿಗೆ ಮೂಡ್ ಫ್ರೆಶ್ ಮಾಡುತ್ತೆ. ಇದರಿಂದ ತಮ್ಮ ಉದ್ಯೋಗಗಳತ್ತ ಗಮನ ಹರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗಿದೆ.
ಸಂಗೀತ ಒಂದು ಕಲೆ, ಸಂಗೀತ ಒಂದು ಔಷಧಿ, ಮನಸ್ಸಿಗೆ ನೆಮ್ಮದಿ ನೀಡುವ ಒಂದು ಅಸ್ತ್ರ.
ಎಲ್ಲಾ ಗಾಯಕರು, ಸಂಗೀತಕಾರರು, ಸಂಗೀತ ಬರೆಯುವವರಿಗೆ ಧನ್ಯವಾದಗಳು.