ಉಡುಪಿ: ನಕಲಿ ಚಿನ್ನ ಅಡವಿಟ್ಟು 20 ಲಕ್ಷರೂ. ಮೋಸ!
– ಸೊಸೈಟಿಯಲ್ಲಿ ನಕಲಿ ಅಡ ಇಟ್ಟು ವಂಚನೆ,ದೂರು
– ಗೊತ್ತಾಗುತ್ತಿದ್ದಂತೆ ಕಾರು ಬಿಟ್ಟು ಪರಾರಿಯಾದ ವ್ಯಕ್ತಿ!
NAMMUR EXPRESS NEWS
ಉಡುಪಿ : ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಗ್ರಾಹಕನೋರ್ವ 20.62 ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸಂಘದ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ಪೊಲೀಸರಿಗೆ ದೂರು ನೀಡಿದ್ದು, ಸಂಘದ ಸದಸ್ಯ ಆಪಾದಿತ ಮಹಮ್ಮದ್ ರಿಯಾಜ್ ಹಲವು ಬಾರಿ ಚಿನ್ನ ಅಡವಿರಿಸಿ ಸಾಲ ಪಡೆದಿದ್ದರು. ಆದರೆ ಸೆ. 5ರಂದು ಕಾರಿನಲ್ಲಿ ಸೊಸೈಟಿಗೆ ತನ್ನ ಹೆಂಡತಿ ಹಾಗೂ ದಾವೂದ್ ಅಬೂಬಕ್ಕರ್ ಎಂಬವರೊಂದಿಗೆ ಬಂದು 2 ನಕ್ಷೇಸ್ ತಂದು ಸಾಲ ಕೇಳಿದ್ದರು. ಈ ವೇಳೆ ಅನುಮಾನಗೊಂಡ ಜಲೇಂದ್ರ ಅವರು ಸಂಘದ ಸರಾಫರಾದ ಅಶೋಕ್ ಆಚಾರ್ಯ ಅವರಿಂದ ಚಿನ್ನ ಪರಿಶೀಲಿಸಿದಾಗ ಅದು ನಕಲಿ ಚಿನ್ನವೆಂದು ತಿಳಿಯಿತು.
ಈ ವೇಳೆ ಆಪಾದಿತರು ತಾವು ಬಂದ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ನಡುವೆ ಈ ಹಿಂದೆ ಅಡವಿರಿಸಿದ ಎಲ್ಲ ಚಿನ್ನಗಳನ್ನು ಪರಿಶೀಲಿಸಿದಾಗ ಅವುಗಳೂ ಸಹ ನಕಲಿ ಎಂದು ತಿಳಿದು ಬಂದಿದ್ದು, ಜು. 17ರಿಂದ ಸೆ. 2ರ ವರೆಗೆ ಹಂತ ಹಂತವಾಗಿ ಒಟ್ಟು 527.8 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20,62,000 ರೂ. ಹಣವನ್ನು ಸಾಲವಾಗಿ ಪಡೆದು ಸಂಘಕ್ಕೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.