ಉಡುಪಿಯಲ್ಲಿ ಅದ್ದೂರಿ ವಿಶ್ವ ಬಂಟರ ಸಮಾವೇಶ
– ಬಂಟರ ಅಭಿವೃದ್ಧಿ ನಿಗಮ ಘೋಷಣೆ: ಸಿಎಂ ಭರವಸೆ
– ಬಂಟ ಸಮುದಾಯದ ಸಾವಿರಾರು ಜನರ ಸಮಾಗಮ
NAMMUR EXPRESS NEWS
ಉಡುಪಿ: ಶನಿವಾರ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಬಂಟ ಸಮಯದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮ ಆರಂಭಿಸಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬಂಟ ಸಮುದಾಯ ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದೆ. ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರು ಮತ್ತು ಮಂಗಳೂರು-ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು. ವಿಶ್ವದ ಎಲ್ಲಾ ಕಡೆ ಹರಿಡಿದ್ದು ತಾವು ಹೋಗುವ ವಿಶ್ವದ ಎಲ್ಲಾ ಕಡೆ ಎಲ್ಲರ ಜತೆಗೂ ಬೆರೆತು, ಸಹೃದಯತೆಯಿಂದ ಬೆರೆಯುತ್ತಾರೆ. ಇದು ಬಂಟರ ಸಮುದಾಯದ ಹೆಗ್ಗಳಿಕೆ ಎಂದರು.
ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಎಲ್ಲೇ ಹೋದರು ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮಗಳ ಪ್ರೇಮ ಮತ್ತು ಅಕ್ಕರೆ ಅನುಕರಣೀಯ. ಇದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು. ಬಂಟ ಸಮಾಜ ಜಾತ್ಯತೀತ ಸಮುದಾಯ. ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವೀಯ ಮೌಲ್ಯವನ್ನು ಆಚರಿಸುತ್ತಿದೆ. ಇದು ಹೆಮ್ಮೆಯ ಸಂಗತಿ. ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಇದು ಅತ್ಯಂತ ಶ್ಲಾಘನೀಯ. ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕಕ್ಕೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ, ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಲೆ, , ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.
ಹೊರ ರಾಜ್ಯ, ವಿದೇಶಗಳಲ್ಲಿ ಇರುವ ಬಂಟ ಸಮುದಾಯದವರನ್ನ ಒಗ್ಗೂಡಿಸುವ ಕೆಲಸವನ್ನು ಉಡುಪಿ-ಮಂಗಳೂರು ಬಂಟ ಸಮಾಜದವರು ಈ ಸಮ್ಮೇಳನದ ಮೂಲಕ ಮಾಡಿದ್ದಾರೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಜಿ ಸಚಿವ ರಮಾನಾಥ ರೈ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ , ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಡಾ.ಪಿ.ವಿ.ಶೆಟ್ಟಿ, ಸಂತೋಷ್ ಗುರುಜಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.