ನಟ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ವೋಟ್!
– ಮತಗಟ್ಟೆಗೆ ಬಂದ ನವ ದಂಪತಿಗಳ ಮತದಾನ
– ಕರಾವಳಿ, ಮಲೆನಾಡಲ್ಲಿ ಬಿರುಸಿನ ಮತದಾನ
NAMMUR EXPRESS NEWS
ಮಂಗಳೂರು/ಉಡುಪಿ/ ಚಿಕ್ಕಮಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನವಾಗುತ್ತಿದ್ದು, ಅತಿಹೆಚ್ಚು ಮತದಾನ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಗಿದೆ. ಉಡುಪಿಯಲ್ಲಿ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ. ಮೂಡಿಗೆರೆಯ ಕುಂದೂರು ಗ್ರಾಮದಲ್ಲಿ ನವವಧುನಿಂದ ಮತದಾನ ಗಮನ ಸೆಳೆದಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಜಾನೆಯಿಂದ ಬಿರುಸು ಪಡೆದುಕೊಂಡಿದೆ. ಒಂದೆಡೆ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ರೆ ಮತ್ತೊಂದೆಡೆ ಹಸೆಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಮತದಾನ:
ಉಡುಪಿಯಲ್ಲಿ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ. ‘ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ನೋಡಿ ವೋಟ್ ಹಾಕುತ್ತೇನೆ. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ಓಟ್ ಮಾಡ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದು ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು. ಗುರುವಾರ ರಾತ್ರಿ ಬೆಂಗಳೂರಿಂದ ಹೊರಟು ಉಡುಪಿಗೆ ಬಂದಿದ್ದೇನೆ. ನಾನು ಬೆಂಗಳೂರು ಸೇರಿ 18 ವರ್ಷ ಆಯ್ತು .
ಪ್ರತಿ ಬಾರಿ ವೋಟಿಗೆ ನಾನು ಉಡುಪಿಗೆ ಬರುತ್ತೇನೆ. ವೋಟು ನಮ್ಮ ಹಕ್ಕು ನಮ್ಮ ಜವಾಬ್ದಾರಿ . ವೋಟ್ ಗೋಸ್ಕರ ಬೆಂಗಳೂರಿಂದ ಊರಿಗೆ ಬರುವುದು ಖುಷಿ. ನನ್ನ ಊರು ನನ್ನ ದೇಶ ನಮ್ಮ ಜವಾಬ್ದಾರಿ ಏನೋ ಖುಷಿ ಇದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 197 ರಲ್ಲಿ ಮತಗಟ್ಟೆಗೆ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.
ನವ ವಧುನಿಂದ ಮತದಾನ!
ಹಸೆಮಣೆ ಏರುವ ಮುನ್ನ ಮದುಮಗಳಾಗಿ ಅಲಂಕಾರಗೊಂಡು ಯುವತಿ ತನ್ನ ಬೂತ್ ನಲ್ಲಿ ಮೊದಲ ಮತದಾನ ಮಾಡಿ ಮದುವೆಗೆ ತೆರಳಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ. ಕುಂದೂರು ಸಮೀಪದ ತಳವಾರ ಗ್ರಾಮದ ಸೌಮ್ಯ ಎಂಬ ಯುವತಿಯ ಮದುವೆ ಕೊಪ್ಪ ಮೂಲದ ಸಂಜಯ್ ಎಂಬುವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್ ನಲ್ಲಿ ಮದುವೆ ನಡೆಯಲಿದೆ. ಮತದಾನದ ಬಳಿಕ ತಳವಾರ ಗ್ರಾಮದಿಂದ ಸುಮಾರು 20 ಕಿ.ಮೀ. ದೂರದ ಮೂಡಿಗೆರೆಗೆ ತೆರಳಿದ್ದಾರೆ.
ಕುಂದೂರು ಗ್ರಾಮದ ಬೂತ್ ನಂಬರ್ 86ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ 11 ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸೌಮ್ಯಾಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿಗಳು ಕೂಡ ಶುಭ ಕೋರಿದ್ದಾರೆ.
ಹಿರಿಯ ನಾಗರೀಕರ ಉತ್ಸಾಹ..!
ಮತದಾನದ ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರು ಅತ್ಯಂತ ಉತ್ಸಾಹದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆಗಳಿಗೆ ಆಗಮಿಸಿದ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಗರದ ಬಸವನಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಆಗಮಿಸಿದ್ದ 80 ವರ್ಷದ ವೃದ್ದೆ ಕನ್ನಮ್ಮ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸೊಪ್ಪು, ಹೂವಿನ ವ್ಯಾಪಾರಿಯಾಗಿರುವ ಕನ್ನಮ್ಮ ವ್ಯಾಪಾರಕ್ಕೆ ಹೋಗುವ ಹಿನ್ನೆಲೆಯಲ್ಲಿ ಮುಂಜಾನೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಕನ್ನಮ್ಮ ಮುಂದಿನ ಚುನಾವಣೆಗೆ ನಾನು ಇರ್ತೀನೋ ಇಲ್ಲವೋ ಗೊತ್ತಿಲ್ಲ, ಆದರೆ ಮತದಾನ ಒಂದು ಪವಿತ್ರವಾದ ಕಾರ್ಯವಾಗಿದ್ದು ನಮ್ಮ ಕರ್ತವ್ಯವನ್ನು ನಾನು ಮಾಡಿದ್ದೇನೆ. ನಾನು ವ್ಯಾಪಾರಕ್ಕೆ ಹೋಗುವ ಕಾರಣ ಬೆಳಿಗ್ಗೆ ಬೇಗ ಬಂದು ವೋಟ್ ಮಾಡಿದ್ದೇನೆ ಎಂದರು.