ಉಡುಪಿಯಲ್ಲಿ ಬಿಜೆಪಿ ಹೋರಾಟ!
– ವಾಲ್ಮೀಕಿ ನಿಗಮ ಹಗರಣ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಉಡುಪಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ
– ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಮುತ್ತಿಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರು
– ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ಸಂಘರ್ಷ
NAMMUR EXPRESS NEWS
ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿರುವ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದ ಗೇಟಿನ ಎದುರು ನೆರೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒಳನುಗ್ಗಲು ಪ್ರಯತ್ನಿಸಿದರು. ಆದರೆ ಪೊಲೀಸರು ಗೇಟು ಹಾಕಿ ಪ್ರತಿಭಟನಕಾರರು ಒಳ ಪ್ರವೇಶಿಸಿದಂತೆ ತಡೆದರು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಜಿಲ್ಲಾಧಿಕಾರಿ ಕಚೇರಿ ಗೇಟ್ ಅನ್ನು ತಳ್ಳಿಕೊಂಡು ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆಹಿಡಿದರು.
ಈ ವೇಳೆ ಕೆಲಕಾಲ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಅಡೆಯಿತು.. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.