ಹಿಂದೂ ಹೆಸರಲ್ಲಿ ಮೋಸ: ಚೈತ್ರಾ ಕುಂದಾಪುರ ಅರೆಸ್ಟ್!
– ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚನೆ
– ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
NAMMUR EXPRESS NEWS
ಉಡುಪಿ: ಕರಾವಳಿ ಮೂಲದ ಉದ್ಯಮಿಯೊಬ್ಬರಿಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ, ಹಿಂದು ಕಾರ್ಯಕರ್ತೆ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಇದೀಗ ರಾಜಕೀಯವಾಗಿ ಭಾರೀ ಕುತೂಹಲ ಮೂಡಿಸಿದೆ. ಬಹು ಕೋಟಿ ವಂಚನೆ ಪ್ರಕರಣದ ಬಳಿಕ ಕಳೆದ ಕೆಲ ಸಮಯದಿಂದ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದಳು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಚೈತ್ರಾ ಕುಂದಾಪುರ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಬಹು ಕೋಟಿ ವಂಚನೆ?!
ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಾಗೂ ಈಕೆಯ ಗ್ಯಾಂಗ್ ಸುಮಾರು 7 ಕೋಟಿ ರೂಪಾಯಿ ವಸೂಲಿ ಮಾಡಿ ಬಳಿಕ ಸುಳ್ಳು ಹೇಳಿಕೊಂಡು ನಾಪತ್ತೆಯಾಗಿದ್ದರು. ಅಲ್ಲಿಂದ ಬೇರೆಯವರಿಗೆ ಟಿಕೆಟ್ ಸಿಕ್ಕಿ ಅವರು ಗೆದ್ದಿದ್ದರು. ವಂಚನೆ ಬಗ್ಗೆ ಗೋವಿಂದ ಬಾಬು ಪೂಜಾರಿ ಬಿಜೆಪಿ ಹೈಕಮಾಂಡ್ ಗಮನಕ್ಕೂ ತಂದಿದ್ದರು. ಆದರೆ ಕೊನೆಗೆ ತಮಗಾದ ಮೋಸದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಚೈತ್ರಾ ಕುಂದಾಪುರ ಹಾಗೂ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯಿಂದ ಮೂರು ಹಂತದಲ್ಲಿ ಸುಮಾರು 7 ಕೋಟಿ ರೂಪಾಯಿಗಳನ್ನು ಆರೋಪಿಗಳು ಪಡೆದಿದ್ದರು. ಪ್ರಕರಣ ಸಂಬಂಧ ಮಂಗಳವಾರ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ ನಾಯಕ್ ಪೆಲತ್ತೂರುವನ್ನು ಸಿಸಿಬಿ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉದ್ಯಮಿ ಗೋಪಾಲ ಬಾಬು ಪೂಜಾರ್ ಅವರ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ಚೈತ್ರಾ ಕುಂದಾಪುರ ಗ್ಯಾಂಗ್, ಕೇಂದ್ರದ ನಾಯಕರು, ಆರ್ಎಸ್ಎಸ್ ಪ್ರಮುಖರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ಅಲ್ಲದೆ ಆರ್. ಎಸ್. ಎಸ್ ನಾಯಕರೊಬ್ಬರೂ ಮೃತಪಟ್ಟಿದ್ದಾರೆ ಎಂದು ಸುಳ್ಳು ಕೂಡ ಹೇಳಿದ್ದರು. ಹಿಂದು ಸಂಘಟನೆಯ ನಿಷ್ಠಾವಂತ ಕಾರ್ಯಕರ್ತರ ಮೇಲೆಯೇ ಈಕೆ ಸುಳ್ಳು ಕೇಸ್ ದಾಖಲಿಸಿದ್ದಳು. ಇದೀಗ ಆಕೆಗೆ ಶಿಕ್ಷೆ ಆಗಲಿದೆ.