ಆನ್ಲೈನ್ ವಂಚಕರಿಗೆ ಕರಾವಳಿ ಟಾರ್ಗೆಟ್!
– ವಂಚಕರ ಮೋಸದ ಜಾಲಕ್ಕೆ 17.35 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
– ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4.42 ಲಕ್ಷ ರೂ. ವಂಚನೆ
NAMMUR EXPRESS NEWS
ಉಡುಪಿ: ಕರಾವಳಿಯಲ್ಲಿ ಸೈಬರ್ ವಂಚಕರ ಮೋಸದ ಜಾಲಕ್ಕೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಿನಕ್ಕೊಂದು ಪ್ರಕರಣಗಳಾದೂ ಕಂಡುಬರುತ್ತಿದ್ದು, ಇದಲ್ಲದೇ ಸೈಬರ್ ವಂಚಕರ ಬಲೆಗೆ ಬಿದ್ದ ಅನೇಕರು ಮಾನಹಾನಿಗೆ ಅಂಜಿ ಪ್ರಕರಣ ದಾಖಲಿಸಲು ಮುಂದೆ ಬರುತ್ತಿಲ್ಲ. ಮುಂಬೈ ಕ್ರೈಂ ಬ್ರಾಂಚ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಮಂಗಳೂರಿನ ಹಿರಿಯ ವ್ಯಕ್ತಿಯೋರ್ವರನ್ನು ಬೆದರಿಸಿ ಆನ್ಲೈನ್ ಮೂಲಕ 1.60 ಕೋಟಿ ರೂ. ಪಡೆದು ವಂಚನೆ ಮಾಡಿದ ಬೆನ್ನಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ಬಂದ ಆನ್ಲೈನ್ ಪಾರ್ಟ್ಟೈಮ್ ಕೆಲಸ ಹಾಗೂ ಆನ್ಲೈನ್ ಟ್ರೇಡಿಂಗ್ ಮೇಸಜ್ನ ಬಲೆಗೆ ಬಿದ್ದ ಹೇರೂರು ಗ್ರಾಮದ ಕೊಳಂಬೆಯ ಸುಬ್ರಹ್ಮಣ್ಯ ಎಂಬವರು ಕೇವಲ ಮೂರು ದಿನಗಳಲ್ಲಿ ಒಟ್ಟು 17.35 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯ ಸೂಚನೆಯಂತೆ ವಾಟ್ಸಪ್ ನಂಬರ್ಗೆ ಮೇಸ್ಷ್ ಮಾಡಿದ್ದು, ಅದರಲ್ಲಿ ಬಂದ ಸೂಚನೆಯಲ್ಲಿ ಕೆಲವು ಟಾಸ್ಕ್ನ್ನು ಪೂರೈಸಿ 9000ರೂನಷ್ಟು ಹಣ ಪಡೆದಿದ್ದು, ಬಳಿಕ ಟ್ರೇಡಿಂಗ್ ಮಾಡುವ ಸಲುವಾಗಿ ಹಣ ಹೂಡಿಕೆ ಮಾಡಲು ನೀಡಿದ ಸೂಚನೆಯಂತೆ ಮೇ 6ರಿಂದ 9ರ ನಡುವಿನ ಅವಧಿಯಲ್ಲಿ ತನ್ನ ಖಾತೆಯೂ ಅಲ್ಲದೇ ಹೆಂಡತಿ ಹಾಗೂ ಅತ್ತೆಯ ಬ್ಯಾಂಕ್ ಖಾತೆಯಿಂದಲೂ ಆರೋಪಿ ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ಒಟ್ಟು 17,35,000 ರೂ. ಹಣವನ್ನು ಕಳುಹಿಸಿದ್ದರು.
ಆದರೆ ಹಣವನ್ನು ಪಡೆದ ಆರೋಪಿ ತಮಗೆ ಬರಬೇಕಾದ ಹಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ನಂಬಿಸಿ ಮೋಸ ಗೊಳಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4.42 ಲಕ್ಷ ರೂ. ವಂಚನೆ
ಮಲ್ಪೆ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನೋರ್ವನಿಗೆ ಇಬ್ಬರು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಹೂಡೆಯ ಹೊಟೇಲ್ ಒಂದರಲ್ಲಿ ವೈಟರ್ ಆಗಿರುವ ಕ್ರಿಸ್ಟನ್ ಡಿಸೋಜ ವಂಚನೆಗೊಳಗಾಗಿದ್ದು, ಒಟ್ಟಾರೆ ಇವರು 4,42,645 ರೂ. ಹಣ ಕಳೆದುಕೊಂಡಿದ್ದಾರೆ. ಸುಮಿತ್ ಮತ್ತು ಸುಭಾಸ್ ಚೌಹಾಣ್ ವಂಚಿಸಿದ ಆರೋಪಿಗಳಾಗಿದ್ದಾರೆ
ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕ್ರಿಸ್ಟನ್ ಡಿಸೋಜರ ಮೊಬೈಲ್ಗೆ ಮೇ7 ಹಾಗೂ 8ರಂದು ಸುಮಿತ್ ಮತ್ತು ಸುಭಾಸ್ ಚೌಹಾಣ್ ಎಂಬವರು ಬೇರೆ ಬೇರೆ ಮೊಬೈಲ್ಗಳಿಂದ ಕರೆ ಮಾಡಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4.42 ಲಕ್ಷ ರೂ.ಹಣ ಪಡೆದಿದ್ದು, ಉದ್ಯೋಗವನ್ನು ದೊರಕಿಸಿ ಕೊಡದೇ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ಕ್ರಿಸ್ಟನ್ ಅವರ ತಂದೆ ರೆನಿಲ್ಲಾ ಡಿಸೋಜ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.