ಉಡುಪಿ ಜಿಲ್ಲೆಯಲ್ಲಿ ಮತ ಸಮರಕ್ಕೆ ಕ್ಷಣಗಣನೆ ಶುರು
– 1842 ಮತದಾನ ಕೇಂದ್ರ: ಮತಯಂತ್ರದೊಂದಿಗೆ ಪ್ರತಿ ಮತಗಟ್ಟೆ ಕೇಂದ್ರ ತಲುಪಿದ ಸಿಬ್ಭಂದಿ
– ಮತ ಚಲಾಯಿಸುವುದೊಂದೇ ಬಾಕಿ.!
NAMMUR EXPRESS NEWS
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಮತಗಟ್ಟೆ ಕೇಂದ್ರಕ್ಕೂ ಮತಯಂತ್ರದೊಂದಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ಇನ್ನೇನಿದ್ದರೂ ಮತದಾರರು ಮತಚಲಾಯಿಸುವುದೊಂದೇ ಬಾಕಿ.! ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ 1842 ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಸ್ಟರಿಂಗ್ ಸೆಂಟರ್ನಿಂದ ಮತಯಂತ್ರಗಳು, ಚುನಾವಣೆಗೆ ಅಗತ್ಯವಿರುವ ಪರಿಕರಗಳನ್ನು ಪಡೆದು ಗುರುವಾರ ಸಂಜೆ 6.50 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮತದಾನ ಕೇಂದ್ರಗಳನ್ನು ಸುರಕ್ಷಿವಾಗಿ ತಲುಪಿದ್ದಾರೆ.
ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ಮಾಡಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ ಚುನಾವಣೆ ಕುರಿತ ಮಾಹಿತಿ ಸಂಗ್ರಹಣೆಗೆ ಸ್ಥಾಪಿಸಿರುವ ವಾರ್ ರೂಮ್ ನಲ್ಲಿ ಮಾಹಿತಿಗಳನ್ನು ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಪ್ರತಿಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಸಂಜೆ ಎಲ್ಲಾ ಮತದಾನ ಕೇಂದ್ರಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರ ಹಾಗೂ ಮತ್ತಿತರ ಪರಿಕರಗಳನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದ 866 ಮತ ಕೇಂದ್ರಗಳಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರಗಳನ್ನು ಕೊಂಡೊಯ್ಯಲು 252 ಜಿ.ಪಿ.ಎಸ್ ಅಳವಡಿಸಿದ ಬಸ್ ಹಾಗೂ ಇತರೆ ಲಘು ವಾಹನಗಳನ್ನು ಬಳಸಲಾಗಿತ್ತು. ಈ ವಾಹನಗಳ ಜಿ.ಪಿ.ಎಸ್ ಟ್ರಾö್ಯಕಿಂಗ್ ಅನ್ನು ವಾರ್ರೂಮಿನಲ್ಲಿ ಮಾಹಿತಿ ಪಡೆಯಲಾಗಿದೆ ಎಂದರು.
ಪ್ರತೀ ಮತದಾನ ಕೇಂದ್ರದಿಂದ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗುವುದು ಎಂದ ಅವರು ಪ್ರತೀ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ವಿವರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲು ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ 866 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 791 ಮತಗಟ್ಟೆ ಕೇಂದ್ರಗಳಿಗೆ ವೆಬ್ಕಾಸ್ಟಿಂಗ್ ಅಳವಡಿಸಿದ್ದು, ಈ ಮತಗಟ್ಟೆಗಳಲ್ಲಿ ನಡೆಯುವ ಪ್ರತಿಯೊಂದು ಕ್ಷಣವನ್ನು ನೇರವಾಗಿ ವಾರ್ರೂಮಿನಿಂದ ವೀಕ್ಷಿಸಲಾಗುವುದು ಎಂದರು.