ಕಾರ್ಕಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ!
– ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವ
– ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
NAMMUR EXPRESS NEWS :
ಕಾರ್ಕಳ: ಸುಮಾರು 550 ವರ್ಷಗಳ ಸುದೀರ್ಘ ಇತಿಹಾಸವಿರುವ ಪಡು ತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನವು ನಿತ್ಯ ಉತ್ಸವದ ತಾಣವಾಗಿ ನಾಡಿನಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಅದರಲ್ಲಿ ಏಪ್ರಿಲ್ ತಿಂಗಳಲ್ಲಿ ಬರುವ ರಥೋತ್ಸವ ಮತ್ತು ಡಿಸೆಂಬರ್ ತಿಂಗಳಲ್ಲಿ ಬರುವ ಲಕ್ಷ ದೀಪೋತ್ಸವ ಇವು ಎರಡು ದೊಡ್ಡ ಉತ್ಸವಗಳು. ಅದರಲ್ಲಿ ಕೂಡ ಇಲ್ಲಿ ನಡೆಯುವ ಲಕ್ಷ ದೀಪೋತ್ಸವವು ಕಾರ್ಕಳದ ಭಕ್ತರಿಗೆ ತುಂಬಾನೆ ವಿಶೇಷ . ಈ ಬಾರಿ ಡಿ. 2ರಂದು ಶನಿವಾರ ದೇವಳದ ಲಕ್ಷ ದೀಪೋತ್ಸವ ಜರುಗಲಿದೆ. ಈ ಪ್ರಯುಕ್ತ ದೀಪೋತ್ಸವದ ಸಿದ್ಧತೆಯೂ ತುಂಬಾ ಭರದಿಂದ ನಡೆಯುತ್ತಿದೆ. ಕಾರ್ಕಳದ ನಗರದೆಲ್ಲೆಡೆ ದೀಪೋತ್ಸವದ ರಂಗು ಕಳೆಗಟ್ಟಿದೆ. ದೇವಾಲಯವು ಗೂಡು ದೀಪ, ಹಣತೆ, ಹೂವುಗಳ ಅಲಂಕಾರ ಮತ್ತು ಮಿನಿಯೇಚರ್ ಬಲ್ಬುಗಳಿಂದ ಕಂಗೊಳಿಸುತ್ತಿದೆ.
ಕೆರೆ ದೀಪದ ವೈಭವ :
ಡಿ.1 ರಂದು ಕೆರೆ ದೀಪೋತ್ಸವ ನಡೆಯಲಿದೆ. ಅಂದು ರಾತ್ರಿ ಎಂಟು ಗಂಟೆಯಿಂದ ಶ್ರೀ ದೇವಸ್ಥಾನದಲ್ಲಿ ಪೂಜೆಯಾಗಿ ಕೆಂಪು ಗರುಡ ವಾಹನದಲ್ಲಿ ಹೊರಟ ದೇವರ ಉತ್ಸವವು ನಗರ ಮಧ್ಯದಲ್ಲಿ ಇರುವ ಮಣ್ಣ ಗೋಪುರದವರೆಗೆ ಸಾಗಿ ಅಲ್ಲಿಂದ ಮತ್ತೆ ಮರಳಿ ದೇಗುಲದ ಕೆರೆಗೆ ಆಗಮಿಸುವುದು. ಕೆರೆಯಲ್ಲಿ ಮೂರು ಸುತ್ತು ದೋಣಿಯಲ್ಲಿ ವಿಹರಿಸುವುದು ಭಾರೀ ಚಂದ. ನಂತರ ಕೆರೆಯ ನಡುವೆ ಇರುವ ಕಟ್ಟೆಯಲ್ಲಿ ದೇವರಿಗೆ ದೀಪೋತ್ಸವದ ಪೂಜೆ ಆದ ಬಳಿಕ ದೇವರು ದೇವಸ್ಥಾನಕ್ಕೆ ತೆರಳುವುದು. ಅಲ್ಲಿ ಸುಡುಮದ್ದು ಹಸಿರು ಪಟಾಕಿ, ಹಣತೆಗಳ ವೈಭವ ಎಲ್ಲವೂ ನಯನ ಮನೋಹರ.
ಲಕ್ಷದೀಪೋತ್ಸವ :
ಡಿ.2 ರಂದು ದೇವಾಲಯದಲ್ಲಿ ಲಕ್ಷದೀಪೋತ್ಸವದ ವೈಭವವು ನಡೆಯಲಿದ್ದು ಅಂದು ಬೆಳಗ್ಗೆ 9-30 ಗಂಟೆಗೆ ಆರಂಭ ಆಗುತ್ತದೆ. ದೇವಸ್ಥಾನದಲ್ಲಿ ದೇವರಿಗೆ ಪೂಜೆ, ಪ್ರಾರ್ಥನೆ ನಡೆಯುತ್ತದೆ. ಅನಂತರ ಶ್ರೀನಿವಾಸ ದೇವರನ್ನು ಸ್ವರ್ಣ ಮಂಟಪದಲ್ಲಿ ಹಾಗೂ ವೆಂಕಟರಮಣ ದೇವರನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭುವನೇಂದ್ರ ಕಾಲೇಜು ಬಳಿಯಿರುವ ಶ್ರೀನಿವಾಸ ವನಕ್ಕೆ ವೇದ ಘೋಷ, ಭಜನೆ, ಮಂತ್ರಗಳ ವೈಭವಗಳ ಜೊತೆ ಹೊರಡುವುದು. ವರ್ಷಕ್ಕೆ ಒಂದು ಬಾರಿ ಈ ಸಂದರ್ಭದಲ್ಲಿ ಶ್ರೀನಿವಾಸ ಮತ್ತು ವೆಂಕಟರಮಣ ಎರಡೂ ದೇವರು ಒಟ್ಟಿಗೆ ಹೊರಡುತ್ತಾರೆ. ವನವನ್ನು ತಲುಪಿದ ನಂತರ ಮಧ್ಯಾಹ್ನ 3 ಗಂಟೆಗೆ ದೇವರಿಗೆ ಅಭಿಷೇಕ ಪ್ರಾರಂಭವಾಗಿ ಸಂಜೆ 5.30ರ ಹೊತ್ತಿಗೆ ಸಮಾಪ್ತಿ ಆಗುವುದು.
ನಂತರ ಸಾವಿರಾರು ಭಕ್ತರಿಗೆ ಮಹಾ ಅನ್ನ ಸಂತರ್ಪಣೆ, ಎಲ್ಲರೂ ನೆಲದ ಮೇಲೆ ಕುಳಿತು ಪ್ರಸಾದ ಭೋಜನ ಸ್ವೀಕಾರ ಮಾಡುವುದು ವಿಶೇಷ ಅನಂತರ ಅಲ್ಲಿಂದ ಹೊರಟ ದೇವರನ್ನು ಮಧ್ಯರಾತ್ರಿಯ ಹೊತ್ತಿಗೆ ಮಣ್ಣಗೋಪುರದಲ್ಲಿ ಕುಳ್ಳಿರಿಸಿ ಭಕ್ತಾದಿಗಳಿಗೆ ದೇವರ ದರ್ಶನದ ಭಾಗ್ಯ ದಾರಿಯುದ್ದಕ್ಕೂ ಹರಕೆಯ ಗುರ್ಜಿ ಅಥವಾ ಕುರಿಂದು (ದೀಪ ರಥಗಳು)ಗಳಲ್ಲಿ ದೇವರು ಪೂಜೆ ಸ್ವೀಕಾರ ಮಾಡುತ್ತಾರೆ. ಇಡೀ ರಾತ್ರಿ ಕಾರ್ಕಳದ ರಥ ಬೀದಿಯಲ್ಲಿ ಸ್ಯಾಕ್ರೋಫೋನ್, ನಾದಸ್ವರ ಮೊದಲಾದ ಸಂಗೀತ ಕಲಾವಿದರಿಂದ ನಾದ ಸೇವೆ ಇರುತ್ತದೆ. ದೇವರು ಪುನಃ ದೇವಸ್ಥಾನಕ್ಕೆ ಬಂದು ಸೇರುವಾಗ ನಸುಕು ಆಗಿರುತ್ತದೆ.
ಅವಭ್ರತ- ವರ್ಣಮಯ ಓಕುಳಿ :
ಡಿ.3 ರಂದು ಬೆಳಿಗ್ಗೆ ಪೂಜೆ, ಪ್ರಾರ್ಥನೆ ಮತ್ತು ಅಭಿಷೇಕ ನಡೆಯುತ್ತದೆ. ಸಾಯಂಕಾಲ 3:30 ಗಂಟೆಗೆ ಪ್ರಾರ್ಥನೆಯಾಗಿ ಅವಕೃತ ಉತ್ಸವ ದೇವಸ್ಥಾನದಿಂದ ಹೊರಟು ರಾಮಸಮುದ್ರದವರೆಗೆ ಹೊರಡಲಿದೆ. ಈ ಸಂದರ್ಭ ಅಲ್ಲಲ್ಲಿ ಮನೆಗಳ ಮುಂದೆ ಓಕುಳಿಯನ್ನು ( ಬಣ್ಣದ ನೀರು) ಸಿದ್ಧಗೊಳಿಸಿ ಇಟ್ಟಿರುತ್ತಾರೆ. ಜನರು ಅದನ್ನು ಮಿಂದು ಮುಂದೆ ತೆರಳುವರು. ದೇವರ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಅರ್ಚಕರು ರಾಮಸಮುದ್ರದ ನೀರಿನಲ್ಲಿ ಮುಳುಗಿ ದೇವರಿಗೆ ಜಳಕ ಮಾಡಿಸುತ್ತಾರೆ. ನಂತರದಲ್ಲಿ ಮರಳಿ ಹೊರಟ ಉತ್ಸವವು ಅನಂತಶಯನದ ಪದ್ಮಾವತಿ ದೇವಸ್ಥಾನದಲ್ಲಿ ನಿಂತು ಅಲ್ಲಿ ಪೂಜೆ ನಡೆಯುತ್ತದೆ.
ಪ್ರಸಾದ ವಿತರಣೆಯ ಬಳಿಕ ಉತ್ಸವವು ಮತ್ತೆ ಹೊರಟು ದಾರಿಯುದ್ದಕ್ಕೂ ಭಕ್ತರಿಂದ ಹಣ್ಣುಕಾಯಿ, ಆರತಿಗಳನ್ನು ಸ್ವೀಕರಿಸುತ್ತಾ ರಾತ್ರಿ 9 ಗಂಟೆಯ ಹೊತ್ತಿಗೆ ದೇವಸ್ಥಾನಕ್ಕೆ ಬರುತ್ತದೆ. ಈ ಉತ್ಸವದ ಉದ್ದಕ್ಕೂ ಭಜನೆ, ವೇದ ಘೋಷ, ಮಂಗಳವಾದ್ಯ ಎಲ್ಲವೂ ಸೇರಿ ಇಡೀ ಕಾರ್ಕಳವು ಭೂವೈಕುಂಠ ಆಗುತ್ತದೆ. ಅನಂತರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಉರುಳು ಸೇವೆ ನಡೆಯುತ್ತದೆ.ಮರು ದೀಪ ರಾತ್ರಿ 2 ಗಂಟೆಗೆ ಮರುದೀಪ ರಥೋತ್ಸವ ನಡೆಯುತ್ತದೆ. ರಥದಲ್ಲಿ ವೆಂಕಟರಮಣ ದೇವರು ಮಣ್ಣಗೋಪುರದವರೆಗೆ ತೆರಳಿ ಪೂಜೆ ಪಡೆದು ಹಿಂತಿರುಗುತ್ತಾರೆ. ಈ ಸಂದರ್ಭ ಪ್ರತಿ ಗುರ್ಜಿಯ ಬಳಿ ಸುಮಾರು 5 ನಿಮಿಷಗಳ ಕಾಲ ರಥ ನಿಂತು ಮತ್ತೆ ಮುಂದಕ್ಕೆ ಹೋಗುತ್ತದೆ.
ಲಕ್ಷ ದೀಪೋತ್ಸವಕ್ಕೆ ಭಾರೀ ತಯಾರಿ :
ಲಕ್ಷದೀಪೋತ್ಸವದ ತಯಾರಿಯಾಗಿ ರಥಬೀದಿಯಲ್ಲಿ ಈಗಾಗಲೇ ಗುರ್ಜಿಗಳ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಂತೂ ವಿವಿಧೆಡೆಯಿಂದ ಬಂದ ಬೀದಿ ವ್ಯಾಪಾರಿಗಳು ಅಂಗಡಿ ಹಾಕಿಕೊಂಡಿದ್ದಾರೆ. ಖರೀದಿ ಈಗಾಗಲೇ ಆರಂಭ ಆಗಿದೆ. ವಿವಿಧ ಸಂಗೀತ ಕಲಾವಿದರು ದೇವಲಾಯದಲ್ಲಿ ಸಂಗೀತ ಸೇವೆ ಆರಂಭ ಮಾಡಿದ್ದಾರೆ.ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
ಡಿ.1 ರಿಂದ ಡಿ. 3ರವರೆಗೆ ಮೂರುಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್ವರೆಗೆ ರಥಬೀದಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಅದರಂತೆ ಡಿ.1 ರಂದು ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆಯಿಂದ ಪುಕ್ಕೇರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಸಾಗುವ ವಾಹನಗಳು ಮಾರ್ಕೆಟ್ ರೋಡ್, ಕಲ್ಲೊಟ್ಟೆ, ತಾಲೂಕು ಜಂಕ್ಷನ್ ಆಗಿ ಸಂಚರಿಸಬೇಕು.
ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮಾರ್ಗವಾಗಿ ಸಾಗಬೇಕು. ಡಿ. 2 ರಂದು ಬೆಳಗ್ಗೆ 10 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ಡಿ. 3 ರಂದು ಸಂಜೆ 4 ಗಂಟೆಯಿಂದ ಮರುದಿನ ಮುಂಜಾನೆ 4 ಗಂಟೆಯವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆಯಿಂದ ಹಿರಿಯಂಗಡಿ, ಪುಕ್ಕೇರಿ ಮಾರ್ಗವಾಗಿ, ಜೋಡುರಸ್ತೆಯಿಂದ ಕಾರ್ಕಳ ಸಾಗುವ ವಾಹನಗಳು ತಾಲೂಕು ಜಂಕ್ಷನ್, ಕಲ್ಲೊಟ್ಟೆ ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮಾರ್ಗವಾಗಿ ಸಾಗಬೇಕು.