ಉಡುಪಿಯಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
– ನ.24ರಿಂದ ನ.27ರವರೆಗೆ ಲಕ್ಷ ದೀಪೋತ್ಸವ
– ಪ್ರತಿ ದಿನ 25 ಸಾವಿರ ಬತ್ತಿ, 75 ಲೀ ಎಳ್ಳೆಣ್ಣೆಯಿಂದ ದೀಪ
– ಕರಾವಳಿ ಸೇರಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ಆಗಮನ
NAMMUR EXPRESS NEWS
ಉಡುಪಿ: ಕಾರ್ತಿಕ ಮಾಸ ಆರಂಭವಾಗಿದ್ದು, ಎಲ್ಲಡೆ ದೀಪೋತ್ಸವ ಲಕ್ಷದೀಪೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವ ಸೇರಿದಂತೆ ಇತರ ವಿಶೇಷ ಪೂಜೆ ನಡೆಯುತ್ತಿದೆ.
ರಾಜ್ಯದ ಪ್ರಮುಖ ಕೃಷ್ಣನ ದೇವಾಲಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಲಕ್ಷ ದೀಪೋತ್ಸವ ನಡೆಯಲಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 24ರಿಂದ ನವೆಂಬರ್ 27 ರವರೆಗೆ 4 ದಿನಗಳ ಕಾಲ ಲಕ್ಷದಿಪೋತ್ಸವ ನಡೆಯಲಿದೆ. ಉತ್ಥಾನದ್ವಾದಶಿಯಿಂದ ಹುಣ್ಣಿಮೆವರೆಗೆ ಲಕ್ಷದಿಪೋತ್ಸವ ನಡೆಯಲಿದ್ದು, ಬಳಿಕ ರಥೋತ್ಸವಗಳು ಆರಂಭಗೊಳ್ಳಲಿವೆ.
ಇನ್ನು ಈಗಾಗಲೇ ಮಠದ ರಥಬೀದಿಯಲ್ಲಿ ರಥ ಕಟ್ಟುವ ಕಾರ್ಯ ಕೂಡ ಆರಂಭವಾಗಿದ್ದು, ಲಕ್ಷದಿಪೋತ್ಸವಕ್ಕೂ ಸಿದ್ಧತೆಗಳು ಅಂತಿಮಗೊಳ್ಳುತ್ತಿದೆ. ದೀಪೋತ್ಸವಕ್ಕಾಗಿ ರಥಬೀದಿಯ ಸುತ್ತ ಮರದ ಸಲಾಕೆಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಇಡಲಾಗಿದೆ. ಇನ್ನು ಪ್ರತಿ ದಿನ 25 ಸಾವಿರ ಬತ್ತಿ ಹಾಗೂ 75 ಲೀ ಎಳ್ಳೆಣ್ಣೆ ಬಳಸಿಕೊಂಡು ಮಠದ ಸುತ್ತಲೂ ದೀಪ ಬೆಳಗಿಸಲಾಗುತ್ತದೆ.
ವಿವಿಧ ಮಠಾಧೀಶರಿಂದ ಲಕ್ಷ ದೀಪೋತ್ಸವಕ್ಕೆ ಹಣತೆ ಮುಹೂರ್ತ :
ಲಕ್ಷದೀಪೋತ್ಸವದ ಅಂಗವಾಗಿ ನವೆಂಬರ್ 24ರ ಬೆಳಗ್ಗೆ ಶ್ರೀ ಕೃಷ್ಣ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸಿ ಪೂಜೆ ನಡೆಯಲಿದೆ. ಮಧ್ಯಾಹ್ನ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಲಕ್ಷದೀಪೋತ್ಸವಕ್ಕೆ ಹಣತೆ ಮುಹೂರ್ತ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಬಿ ಪೂಜೆ ನಡೆಯಲಿದ್ದು, ಅಷ್ಟ ಮಠಾಧೀಶರು ತಮ್ಮ ಪಟ್ಟದದೇವರಿಗೆ ಅರ್ಗ್ಯ ಪ್ರದಾನ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ಜನವರಿ 14ರಂದು ನಡೆಯುವ ಮಕರ ಸಂಕ್ರಾತಿ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಇನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ವಿದೇಶಿಗ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸುವ ನೀರೀಕ್ಷೆಯಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಸಹ ಸಕಲ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಉಡುಪಿ ಶ್ರೀ ಕೃಷ್ಣ ಮಠದ ಲಕ್ಷದೀಪೋತ್ಸವ ನಡೆಸಲು ಮಠದ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.