ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಸೋಮಾರಿತನ!
– ಲೀಡ್ ಬ್ಯಾಂಕ್ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಉಡುಪಿ ಜಿಲ್ಲಾ ಪಂ. ಸಿಇಒ ತೀವ್ರ ಆಕ್ರೋಶ
– ಯೋಜನೆ ಆಸಕ್ತಿ ಇಲ್ಲ: ಮಣಿಪಾಲದ ಸಭೆಯಲ್ಲಿ ಬೇಸರ
NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲಾ ಮಟ್ಟದ ಡಿಸಿಸಿ ಹಾಗೂ ಡಿಎಲ್ಆರ್ಸಿ ಸಭೆಗಳಲ್ಲಿ ಭಾಗವಹಿಸುವ ಕುರಿತಂತೆ ನಿರಾಸಕ್ತಿ ಹಾಗೂ ಸರಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲೆಯ ಬ್ಯಾಂಕ್ಗಳು, ಅದರ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಡಿಸಿಸಿ ಹಾಗೂ ಡಿಎಲ್ಆರ್ಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಇವುಗಳು ಅಧ್ಯಕ್ಷರೂ ಆಗಿರುವ ಪ್ರತೀಕ್ ಬಾಯಲ್ ಜಿಲ್ಲೆಯ ಪ್ರಮುಖ ಬ್ಯಾಂಕ್ಗಳ ಪ್ರತಿನಿಧಿಗಳು ಈ ಮಹತ್ವದ ಸಭೆಗೆ ಗೈರುಹಾಜರಾಗಿರುವ ಬಗ್ಗೆ ಪ್ರಾರಂಭದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇನ್ನೊಂದು ವಾರದಲ್ಲಿ ಎಲ್ಲ ಬ್ಯಾಂಕ್ಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ಕರೆದು ಚರ್ಚಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ಈ ಸಭೆಯಲ್ಲಿ ಪಾಲ್ಗೊಂಡು ಚರ್ಚೆಯಲ್ಲಿ ಭಾಗವಹಿಸುವ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಪ್ರಮುಖ ಬ್ಯಾಂಕ್ಗಳು ತೋರುತ್ತಿರುವ ನಿರಾಸಕ್ತಿಯನ್ನು ಬಾಯಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತಾನು ಕೇಂದ್ರ ಆರ್ಥಿಕ ಸಚಿವಾಲಯ, ರಾಜ್ಯ ಸರ್ಕಾರ ಹಾಗೂ ಆರ್ಬಿಐನ ಓಂಬುಡ್ಸ್ಮನ್ಗೂ ಪತ್ರ ಬರೆಯುವುದಲ್ಲದೆ ಬ್ಯಾಂಕ್ಗಳ ಲೈಸೆನ್ಸ್ ರದ್ದುಪಡಿಸುವುದಕ್ಕೂ ಅವಕಾಶವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಸರಕಾರಿ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿ ಪರಿಶೀಲನೆ ವೇಳೆ ಜಿಲ್ಲಾ ಪಂಚಾಯತ್ ಮೂಲಕ ವಿವಿಧ ಇಲಾಖೆಗಳು ಕಳುಹಿಸುವ ಯೋಜನಾ ಫಲಾನುಭವಿಗಳ ಅರ್ಜಿಗಳ ವಿಲೇವಾರಿಗೆ ಬ್ಯಾಂಕ್ಗಳು ತೋರುತ್ತಿರುವ ನಿರ್ಲಕ್ಷ್ಯದ ಧೋರಣೆ ಬಗ್ಗೆ ಅವರು ಸಭೆಯಲ್ಲಿ ಪದೇಪದೇ ಕಿಡಿಕಾರಿದ್ದಾರೆ.
ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ವ್ಯವಹಾರವೆಂದರೆ ಕೇವಲ ಹಣಕಾಸಿನ ಲೇವಾದೇವಿ ಮಾತ್ರ ಎಂದು ತಿಳಿದಿರಬೇಕು. ಬ್ಯಾಂಕ್ಗಳಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂಬುದನ್ನು ಅವರೆಲ್ಲ ಮರೆತಿದ್ದಾರೆ. ಅಲ್ಲಿರುವ ಹಣ ಜನರ ದುಡಿಮೆಯ ಫಲ. ಇವರಿಗೆ ಜನರಿಗಾಗಿ ಇರುವ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯೇ ಇದ್ದಂತೆ ಇಲ್ಲ. ಈ ಬಗ್ಗೆ ನಾನು ಕೇಂದ್ರ ಆರ್ಥಿಕ ಸಚಿವಲಾಯಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು. ಇದೇವೇಳೆ ಸಿಇಒ ಅವರು ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳನ್ನು ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕೃಷಿ ಮೂಲಸೌಕರ್ಯ ವೃದ್ಧಿಗೆ ಇರುವ 330.43 ಕೋಟಿ ರೂ.ಗಳಲ್ಲಿ ಕೇವಲ 22.97 ಕೋಟಿ ಖರ್ಚಾಗಿ ಶೇ.6.95 ಪ್ರಗತಿಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ಇರುವ ಎಫ್ಪಿಒಗಳು ಏನು ಮಾಡುತ್ತಿವೆ? ಎಂದು ಅಧಿಕಾರಿಯನ್ನು ಕೇಳಿದಾಗ ಅವುಗಳು ಕೊಂಡು ಮಾರುವ ಕೆಲಸವಷ್ಟೇ ಮಾಡುತ್ತಿವೆ ಎಂದು ಉತ್ತರಿಸಿದರು. ಇದಕ್ಕೂ ಬಾಯಲ್ ಆಕ್ಷೇಪ ವ್ಯಕ್ತಪಡಿಸಿದರು.