ಬಿಜೆಪಿಗೆ ಬಂಡಾಯದ ಭಾವುಟ ಹಾರಿಸಿದ ರಘುಪತಿ ಭಟ್!
– ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
– ತೀವ್ರ ಕುತೂಹಲ ಕೆರಳಿಸಿದ ಕರಾವಳಿ,ಮಲೆನಾಡು ಭಾಗ ಪ್ರತಿನಿಧಿಸುವ ನೈರುತ್ಯ ಪದವೀಧರ – ಶಿಕ್ಷಕರ ಕ್ಷೇತ್ರ
NAMMUR EXPRESS NEWS
ಉಡುಪಿ: ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಹಲವು ಕಡೆ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಅಂತಹ ಕ್ಷೇತ್ರಗಳ ಪೈಕಿ ಸಾಕಷ್ಟು ಕುತೂಹಲ ಮೂಡಿಸಿರುವ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಪ್ರತಿನಿಧಿಸುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಕೂಡ ಒಂದು. ಪದವೀಧರ ಕ್ಷೇತ್ರದಿಂದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯು ಡಾ. ಧನಂಜಯ ಸರ್ಜಿ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದೆ. ಇದರಿಂದ ಸಿಡಿದೆದ್ದಿರುವ ರಘುಪತಿ ಭಟ್ ಅವರು ಬಿಜೆಪಿ ಕಾರ್ಯಕರ್ತರ ಬೆಂಬಲದೊಂದಿಗೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದರು. ಯಾವುದೇ ಒತ್ತಡ ಬಂದರೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು.
ಅದರಂತೆ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಕೆ ಕೊನೆಯದಿನವಾದ ಇಂದು ನೂರಕ್ಕೂ ಅಧಿಕ ಬೆಂಬಲಿಗರೊಂದಿಗೆ ತೆರಳಿ ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಅನುಗ್ರಹ ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ರಘುಪತಿ ಭಟ್ ಜತೆಗೆ ನಮ್ಮ ಟಿವಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಚರಣ್ ಶೆಟ್ಟಿ, ಬಿಜೆಪಿಯ ಹಿರಿಯ ಕಾರ್ಯಕರ್ತರಾದ ವಿಶ್ವನಾಥ್ ಭಟ್, ಕೊಡುಗು ಜಿಲ್ಲೆಯ ಮುಖಂಡರಾದ ಚೇತನ್ ಮಂದಣ್ಣ, ಶಿವಮೊಗ್ಗದ ಎಂ. ಶಿವಶಂಕರ್ ಮುಂತಾದವರು ಜತೆಗಿದ್ದರು.
ಎಂ.ಎಲ್.ಎ ಟಿಕೆಟ್ ಕೂಡ ಸಿಕ್ಕಿರಲಿಲ್ಲ!
ಉಡುಪಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್ಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಟಿಕೆಟ್ ನಿರಾಕರಿಸಲಾಗಿತ್ತು. ಆಗ ಅವರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡದ ಹಿನ್ನಲೆಯಲ್ಲಿ ಅವರು ಬಂಡಾಯವೆದ್ದು ಬಿಜೆಪಿ ವಿರುದ್ಧವೇ ಕಣಕ್ಕಿಳಿದಿದ್ದಾರೆ.