ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್!
– ದಕ್ಷಿಣ ಕನ್ನಡ, ಉಡುಪಿ ಶಾಲೆ ಕಾಲೇಜಿಗೆ ರಜೆ ಘೋಷಣೆ
– ಮೀನುಗಾರಿಕಾ ಶೆಡ್ ಆತಂಕ: 25 ಸಾವಿರ ಲೀ. ಸೀಮೆಎಣ್ಣೆ ಸ್ಥಳಾಂತರ
– ಕಂಬಳದಲ್ಲಿ ಸಾಕಷ್ಟು ಹೆಸರುವಾಸಿ ಕೋಣ ‘ಲಕ್ಕಿ’ ಇನ್ನಿಲ್ಲ
ಮಂಗಳೂರು: ಜುಲೈ 18 ಹಾಗೂ 19 ರಂದು ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಮಾಡಲಾಗಿದೆ.ಈ ಎರಡು ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು. 18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಿದೆ. ಬುಧವಾರವೂ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನಗಳು ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡದ 5 ತಾಲೂಕುಗಳಲ್ಲಿ ರಜೆ ಘೋಷಣೆ
ಭಾರೀ ಮಳೆ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಅಂದರೆ ಜು.18ರಂದು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ & ಕಡಬ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಜು.18 & 19ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ನೀಡಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಗುರುವಾರ 5 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಡ & ಪಿಯು ಕಾಲೇಜುಗಳಿಗೆ ರಜೆ ನೀಡಿ ಡಿಸಿ ಮು ಮುಗಿಲನ್ ಆದೇಶಿಸಿದ್ದಾರೆ. ಆದರೆ ಮಂಗಳೂರು, ಉಳ್ಳಾಲ, ಮೂಡಬಿದಿರೆ, ಮೂಲ್ಕಿ ತಾಲೂಕಿಗೆ ರಜೆ ನೀಡಿಲ್ಲ.
ಉಡುಪಿಯ ಎರಡು ತಾಲೂಕು ಶಾಲೆಗಳಿಗೆ ರಜೆ
ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನಲೆ ಉಡುಪಿ ಜಿಲ್ಲೆಯ ಬೈಂದೂರು & ಹೆಬ್ರಿ ತಾಲೂಕಿನಲ್ಲಿ ಮಾತ್ರ ಇಂದು(ಗುರುವಾರ) ಶಾಲಾ-ಕಾಲೇಜುಗಳಿಗೆ ರಜೆಯನ್ನು ನೀಡಿ ಇದೀಗ ಆದೇಶ ಹೊರಡಿಸಲಾಗಿದೆ. ಈ ಎರಡು ತಾಲೂಕಿನ ಮಳೆ ಪರಿಸ್ಥಿತಿ ಅವಲೋಕಿಸಿದ ಬಳಿಕ ಅಲ್ಲಿನ ತಹಶೀಲ್ದಾರರು, ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆಯನ್ನು ನೀಡಿ ಆದೇಶಿಸಿದ್ದಾರೆ. ಉಳಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಂದು ಎಂದಿನಂತೆ ತರಗತಿಗಳು ನಡೆಯಲಿವೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಗುರುವಾರ ಎಲ್ಲ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮೀನುಗಾರಿಕಾ ಶೆಡ್ ಆತಂಕ: 25 ಸಾವಿರ ಲೀ. ಸೀಮೆಎಣ್ಣೆ ಸ್ಥಳಾಂತರ
ಉಡುಪಿ: ಕಡಳ್ಕೊರೆತದಿಂದಾಗಿ ಪಡುಬಿದ್ರಿಯ ನಡಿಪಟ್ಟ ಪ್ರದೇಶದಲ್ಲಿ ಮೀನುಗಾರಿಕಾ ಶೆಡ್ ಒಂದು ಅಪಾಯಕ್ಕೆ ಸಿಲುಕಿದೆ. ಕಾಪು ತಾಲೂಕಿನಲ್ಲಿರುವ ಮಹೇಶ್ವರಿ ಡಿಸ್ಕೋ ಫಂಡ್ ನ ಮೀನುಗಾರಿಕಾ ಶೆಡ್ ಅಪಾಯಕ್ಕೆ ಸಿಲುಕಿದ್ದು, ಶೇಖರಿಸಿಟ್ಟಿದ್ದ 25 ಸಾವಿರ ಲೀಟರ್ ನಷ್ಟು ಸೀಮೆಎಣ್ಣೆಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಐವತ್ತು ಲಕ್ಷ ರೂಪಾಯಿಯಷ್ಟು ಮೌಲ್ಯದ ಮೀನುಗಾರಿಕಾ ಪರಿಕರಗಳನ್ನು ಕೂಡಾ ಬೇರೆಡೆಗೆ ಸ್ಥಳಾಂತರಿಸಲಾಗಿದೆ. 60 ಕ್ಕೂ ಅಧಿಕ ಮೀನುಗಾರಿಕಾ ಕುಟುಂಬಗಳು ಈ ಶೆಡ್ ಅನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದು, ಕಡಲ್ಗೊರೆತ ತಡೆಗೆ ಹಾಕಲ್ಪಟ್ಟಿದ್ದ ಕಲ್ಲುಗಳು ಸಮುದ್ರ ಪಾಲಾಗಿವೆ.ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದ ಕೋಣ ‘ಲಕ್ಕಿ’ ಇನ್ನಿಲ್ಲ
ಕಿನ್ನಿಗೋಳಿ: ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿ, ಹಲವು ಮೆಡಲ್ ಗೆದ್ದಿದ್ದ ‘ಲಕ್ಕಿ’ ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ. ಕಳೆದ ವರ್ಷದ ಕಂಬಳ ಸೀಸನ್ ನಲ್ಲಿ ಲಕ್ಕಿ ಕೋಣ 5 ಮೆಡಲ್ ಗಳನ್ನು ಗೆದ್ದಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ ಎರಡನೇ ಬಹುಮಾನ ಪಡೆದಿದ್ದ. ಕಕ್ಯಪದವು, ಬೆಂಗಳೂರು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಗೆದ್ದಿದ್ದ.