ಸಾಸ್ತಾನ ಶ್ರೀ ಕ್ಷೇತ್ರ ಕಳಿಬೈಲು ದೇಗುಲಕ್ಕೆ ಬಂದ ಸೀತಾ ನದಿ!
– ದೋಣಿಯಲ್ಲಿ ಭಕ್ತರ ಕರೆ ತಂದ ದೇವಸ್ಥಾನ ಸಮಿತಿ
– ಉಡುಪಿ ಬ್ರಹ್ಮಾವರದ ದೇಗುಲದ ಒಳಗೆ ಮತ್ತು ಸುತ್ತ ನೀರು
NAMMUR EXPRESS NEWS
ಸಾಸ್ತಾನ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೆಳಬೆಟ್ಟು ಮೂಡಹಡು ಗ್ರಾಮದಲ್ಲಿ ನೆಲೆನಿಂತ ಪವಾಡಗಳೊಡೆಯ ಕೊರಗಜ್ಜನ ಕ್ಷೇತ್ರವಾದ ಶ್ರೀ ಕ್ಷೇತ್ರ ಕಳಿಬೈಲಿಗೆ ಸೀತಾನದಿ ಬಂದಿದ್ದು ದೇವಾಲಯ ಸುತ್ತ ನೀರು ಬಂದಿದೆ.
ಪ್ರತಿವರ್ಷವೂ ಮಳೆ ಬರುವ ಹಾಗೆ ಈ ಮಣ್ಣಿಗೆ ಸೀತೆ ಕೂಡ ಸಾಗಿ ಬರುವವಳು ಇದ್ದಾಳೆ. ಈ ವರ್ಷವೂ ಕೂಡ ಸೀತಾ ನದಿ ಹರಿದು ಬಂದು ಇಲ್ಲಿರುವಂತ ಕಲ್ಲು ಹಾಗೂ ಅಮ್ಮನ ಪಾದವನ್ನು ತೊಳೆದು ಹೋಗುತ್ತಿದ್ದಾಳೆ. ಶ್ರೀ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರು ಹಾಗೂ ಸಂಚಾಲಕರಾದ ಶ್ರೀ ಅಭಿಜಿತ್ ಪಾಂಡೇಶ್ವರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಅವಿರತವಾಗಿ ಸುರಿಯುತ್ತಿರುವ ಭಾರೀ ಮಳೆ ತಗ್ಗು ಪ್ರದೇಶಗಳನ್ನು ಜಾಲಾವೃತಗೊಳಿಸಿದೆ. ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುತ್ತಿದ್ದು ನೀರಿನ ಪ್ರವಾಹದಿಂದ ರಸ್ತೆಗಳನ್ನು ಗುರುತಿಸುವುದೇ ಕಷ್ಟವಾಗಿದೆ. ಪ್ರತಿದಿನವೂ ಬರುವಂತೆ ಭಕ್ತರು ಮಂಗಳವಾರ ಸಹ ಹೊರ ಜಿಲ್ಲೆಯಿಂದ ಶ್ರೀ ಕ್ಷೇತ್ರ ಕಳಿಬೈಲಿಗೆ ಆಗಮಿಸಿದ್ದರು. ಆದರೆ ದೇವಾಲಯದ ಸುತ್ತ ನೆರೆ ಇದ್ದುದರಿಂದ ಅವರಿಗೆ ಮಾರ್ಗ ಗುರುತಿಸಿ ಕ್ಷೇತ್ರಕ್ಕೆ ಬರಲು ಅಸಾಧ್ಯವಾಯಿತು. ವಿಷಯ ತಿಳಿದ ದೇವಳ ಸಮಿತಿಯವರು ವಿಶೇಷ ದೋಣಿಯಲ್ಲಿ ಅವರನ್ನು ಕ್ಷೇತ್ರಕ್ಕೆ ಕರೆತಂದಿದ್ದಾರೆ ಎಂದು ಅಭಿಜಿತ್ ವಿವರಿಸಿದರು.