ರಾಜ್ಯದೆಲ್ಲೆಡೆ ಬಿಸಿಲಿನ ತಾಪ
– ನೀರಿಗಾಗಿ ಎಲ್ಲೆಡೆ ಪರದಾಟ!
– ಉಡುಪಿ ಜಿಲ್ಲೆಯಲ್ಲೂ ಅಂತರ್ಜಲದ ಮಟ್ಟ ಕುಸಿತ!
– ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ!
NAMMUR EXPRESS NEWS
ಉಡುಪಿ: ರಾಜ್ಯದೆಲ್ಲೆಡೆ ಬಿಸಿಲಿನ ತಾಪ ಏರುತ್ತಿದ್ದು ಕೆರೆ ಬಾವಿಗಳು ಒಣಗಿ ನಿಂತಿವೆ. ನೀರಿಗಾಗಿ ಪರದಾಟ ಶುರುವಾಗಿದೆ. ಈ ಮಧ್ಯ ಅಂತರ್ ಜಲ ಮಟ್ಟವೂ ಕುಸಿದು ನೀರಿನ ಮೂಲಗಳು ಒಣಗಿ ಹೋಗುತ್ತಿವೆ. ಬೋರ್ ನಲ್ಲಿಯೂ ನೀರು ಬಾರದೆ ನೀರಿನ ತೊಂದರೆ ಶುರುವಾಗಿದೆ. ಉಡುಪಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದರ ಪರಿಣಾಮವಾಗಿ ಅಂತರ್ಜಲ ಮಟ್ಟವೂ ಕಾಲಕ್ರಮೇಣ ಕುಸಿಯುತ್ತಿದೆ. ಜನವರಿ ಒಂದೇ ತಿಂಗಳ ಅವಧಿಯಲ್ಲಿ ಅಂತರ್ಜಲ 0.26 ಮೀಟರ್ಗಳಷ್ಟು ಕುಸಿದಿದೆ. ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ನದಿ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಮಳೆ ನೀರಿನ ಸದುಪಯೋಗ ಹಾಗೂ ನೀರಿನ ಮೂಲಗಳ ಸಂರಕ್ಷಣೆ ಮಾಡದಿದ್ದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಜಲ ತಜ್ಞರು.
ತಿಂಗಳುವಾರು ಮಾಹಿತಿ ಈ ಕೆಳಗಿನಂತೆಯಿದೆ :
2023ರ ಜನವರಿಯಲ್ಲಿ ಅಂತರ್ಜಲ ಮಟ್ಟ 7.79 ಮೀಟರ್ ಇತ್ತು. ಫೆಬ್ರವರಿಯಲ್ಲಿ 8.35 ಮೀ.ಗೆ ಇಳಿದಿತ್ತು. ಮಾರ್ಚ್ ನಲ್ಲಿ 9.07 ಮೀ., ಎಪ್ರಿಲ್ನಲ್ಲಿ 9.64 ಮೀ.. ಮೇ ತಿಂಗಳಿನಲ್ಲಿ 10.2 ಮೀ.ಗೆ ಮುಟ್ಟಿತ್ತು. ಜೂನ್ನಲ್ಲಿ ಬರಬೇಕಾದ ಮಳೆ ತಡವಾಯಿತು. ಜುಲೈ ತಿಂಗಳಿನಲ್ಲಿ ಮಳೆ ಬಂದದ್ದರಿಂದ 3.25 ಮೀ.ಗೆ ಏರಿಕೆಯಾಗಿತ್ತು. ಆಗಸ್ಟ್ನಲ್ಲಿ 4.83 ಮೀ.ಗೆ ಇಳಿದಿತ್ತು. ಸೆಪ್ಟೆಂಬರ್ನಲ್ಲಿ 4.93 ಮೀ.ಗೆ ಕುಸಿದಿತ್ತು. ಅಕ್ಟೋಬರ್ನಲ್ಲಿ 5.96 ಮೀ.ಗೆ ಇಳಿದು, ನವೆಂಬರ್ನಲ್ಲಿ 6.94 ಮೀ.ಗೆ ಕುಸಿದಿತ್ತು. ಡಿಸೆಂಬರ್ನಲ್ಲಿ 7.77 ಮೀಟರ್ ಕೆಳಗೆ ಹೋಗಿದೆ.
2024ರ ಜನವರಿಯಲ್ಲಿ 8.03 ಮೀಟಗೆರ್ಗೆ ಇಳಿದಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಜತೆಗೆ ಮಳೆಯೂ ಒಟ್ಟು ಶೇ. 25ರಷ್ಟು ಕಡಿಮೆಯಾಗಿತ್ತು. 2024ರ ಜನವರಿ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 8.03 ಮೀ. ನಷ್ಟಿದ್ದರೆ, ಕಳೆದ ವರ್ಷ ಇದೇ. ವೇಳೆಗೆ 7.79 ಮೀ. ಇತ್ತು. ಅಂದರೆ 0.23 ಮೀ.ನಷ್ಟು ಇಳಿದಿದೆ. ಮಳೆ ಬಾರದೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂತರ್ಜಲ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಹಿಂದಿನ ಮಳೆಗಾಲದಲ್ಲೂ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ ಎನ್ನುವುದು ಆತಂಕಕ್ಕೆ ಕಾರಣ
ಎಚ್ಚರಿಕೆ ಅಗತ್ಯ:
ಉಡುಪಿ ಮತ್ತು ಬೈಂದೂರಿನ ಕೆಲವು ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಅಪಾಯದ ಹಂತ ತಲುಪಿದೆ. ಕಾರ್ಕಳ ಹಾಗೂ ಕುಂದಾಪುರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ಭಾಗದಲ್ಲಿ ಇಂದಿನಿಂದಲೇ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ ಎನ್ನುವ ಪರಿಸ್ಥಿತಿ ಇದೆ. ಅಂತರ್ಜಲ ಮಟ್ಟದ ವೃದ್ಧಿಗಾಗಿ ಜಲಮೂಲಗಳ ರಕ್ಷಣೆ, ಕಿಂಡಿ ಅಣೆ ಕಟ್ಟುಗಳಿಗೆ ನಿರ್ದಿಷ್ಟ ಸಮಯದಲ್ಲಿ ಹಲಗೆ ಹಾಕುವುದು, ಪ್ರತೀ ಮನೆ ಯಲ್ಲೂ ಮಳೆನೀರು ಶೇಖರಣೆ, ನಿರುಪಯುಕ್ತ ತೆರೆದ ಬಾವಿ, ಬೋರ್ವೆಲ್ಗಳಿಗೆ ಜಲ ಮರುಪೂರಣ ಮಾಡುವ ಪ್ರಕ್ರಿಯೆ ನಡೆಸಬೇಕು ಎನ್ನುತ್ತಾರೆ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು.
ಇಲಾಖೆಯಿಂದ ನಿರ್ದೇಶನ :
ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವ ಶಾಲೆ, ಆಸ್ಪತ್ರೆ, ಸಭಾಭವನ, ಹೊಟೇಲ್ಗಳಿಗೆ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದಿಂದ ಸುತ್ತೋಲೆ ನೀಡಲಾಗಿದೆ. ಎಲ್ಲಿಯೂ ನೀರು ಮಲಿನ, ಪೋಲಾಗದಂತೆ ಎಚ್ಚರ ವಹಿಸಬೇಕು. ಕೈ, ತಟ್ಟೆ ತೊಳೆದ ನೀರನ್ನು ತೋಟಕ್ಕೆ ಬಳಸುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಸೂಚಿಸಿದೆ. ಮಳೆ ಕೊರತೆ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಮೂಲಗಳ ಸಂರಕ್ಷಣೆಯ ಜತೆಗೆ ಮಳೆ ನೀರಿನ ಸದ್ಬಳಕೆಯೂ ಆಗಬೇಕು ಹಾಗೂ ಅಗತ್ಯವಾಗಿ ನೀರಿನ ಮಿತ ಬಳಕೆ ಮಾಡಬೇಕು.