ಶಿಕ್ಷಕಿಯಿಂದ ಹಿಂದೂ ದೇವರ ಅವಹೇಳನ ಆರೋಪ
– ಶಾಲೆಯ ಮುಂದೆ ಪ್ರತಿಭಟನೆಗಿಳಿದ ಪೋಷಕರು!
– ಶಿಕ್ಷಕಿಯನ್ನು ವಜಾಗೊಳಿಸಿದ ಶಾಲಾಡಳಿತ ಮಂಡಳಿ!
– ಮಂಗಳೂರಿನಲ್ಲಿ ಘಟನೆ
NAMMUR EXPRESS NEWS
ಮಂಗಳೂರು: ಹಿಂದೂ ಧರ್ಮ ದೇವರುಗಳ ಬಗ್ಗೆ ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ನಗರದ ವಲೆನ್ಸಿಯಾದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿ ವಜಾಗೊಳಿಸಿದೆ. ಎರಡು ದಿನಗಳಿಂದ ಪೋಷಕರು ಮತ್ತು ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ, ಶಿಕ್ಷಕಿ ಪ್ರಭಾ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ :
ಕೆಲವು ದಿನಗಳ ಹಿಂದೆ ಶಿಕ್ಷಕಿ ಪ್ರಭಾ “ವರ್ಕ್ ಈಸ್ ವರ್ಶಿಪ್’ ಪಾಠ ಮಾಡುವಾಗ ಹಿಂದೂ ಧರ್ಮ ಹಾಗೂ ಶ್ರೀರಾಮದೇವರನ್ನು ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ತಿಳಿಸಿದ್ದರು. ಈ ಕುರಿತು ಪೋಷಕರೊಬ್ಬರು ಮಾತನಾಡಿದ್ದ ಬಗ್ಗೆ ಧ್ವನಿಮುದ್ರಣ ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದು ವಿಚಾರ ವಿವಾದವಾಗಿ ಬದಲಾಯಿತು. ಹಿಂದೂ ಸಂಘಟನೆಗಳು, ರಾಜಕೀಯ ಮುಖಂಡರು, ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಶಾಲೆ ಮುಂಭಾಗ ಪ್ರತಿಭಟನೆ :
ವಲೆನ್ಸಿಯಾದ ಶಾಲೆಯ ಆವರಣದ ಹೊರಭಾಗದಲ್ಲಿ ಗೇಟ್ ಬಳಿ ಸೋಮವಾರ ಬೆಳಗ್ಗೆ ಪೋಷಕರು ಹಾಗೂ ಹಿಂದೂ ಸಂಘಟನೆ ಮುಖಂಡರು ಶಿಕ್ಷಕಿಯ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದರು. ಶಾಸಕ ವೇದವ್ಯಾಸ ಕಾಮತ್ ಅವರು ಕೂಡಾ ಈ ವೇಳೆ ಸೇರಿಕೊಂಡು ಶಾಲಾಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯ ತೀವ್ರತೆಗೆ ಮಣಿದ ಆಡಳಿತ ಮಂಡಳಿ ಶಾಲಾ ಲೆಟರ್ ಹೆಡ್ನಲ್ಲಿ ಶಿಕ್ಷಕಿಯ ವಜಾ ಆದೇಶಪತ್ರ ಹೊರಡಿಸಿದೆ. ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪೋಷಕರನ್ನು ಗೇಟ್ ಹೊರಗೆ ಪೊಲೀಸರು ತಡೆದರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್ ಆಗಮಿಸಿ ಸ್ಥಳದಲ್ಲಿದ್ದ ಬಿಇಒ ಹಾಗೂ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಗೆ ಕರೆಸಿ ತನಿಖೆ ಮಾಡುವುದು ಬಿಟ್ಟು ನೀವೇ ಶಾಲೆಗೆ ಬಂದು ತನಿಖೆ ಮಾಡೋದು ಸರಿಯಾ ಎಂದು ಆಕ್ಷೇಪಿಸಿದರು.
ಬಳಿಕ ಶಾಲಾವರಣದ ಒಳಗೆ ತೆರಳಿದ ವೇದವ್ಯಾಸ ಕಾಮತ್, ಮುಖ್ಯಶಿಕ್ಷಕಿ ಮತ್ತು ಶಾಲಾಡಳಿತ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಹಿಂದೂ ಧರ್ಮ ಅವಹೇಳನ ಮಾಡುವುದು ಎಷ್ಟು ಸರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಆದೇಶ ಪ್ರಕಟಿಸಿದರು ಪ್ರತಿಭಟನೆ ತೀವ್ರತೆ ಪಡೆಯುತ್ತಿರುವುದನ್ನು ಮನಗಂಡ ಶಾಲಾಡಳಿತ ಮಂಡಳಿಯವರು ಏಳನೇ ತರಗತಿ ಶಿಕ್ಷಕಿ ಪ್ರಭಾ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದರು. ಆದೇಶಪತ್ರ ಹಿಡಿದು ಹೊರಬಂದ ಶಾಲೆಯ ಪ್ರಮುಖರು, ಪೋಷಕರ ಎದುರು ಅದನ್ನು ಓದಿಹೇಳಿದರು. ಆದರೆ ಆದೇಶದಲ್ಲಿ ತಪ್ಪು ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳದಿದ್ದರೆ ಬಿಡುವುದಿಲ್ಲ ಎಂದು ಶಾಸಕ ಕಾಮತ್ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಮುಗಿಲನ್ ಮತ್ತು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಇದಕ್ಕೂ ಮೊದಲು. ವಜಾ ಆದೇಶ ಹೊರಡಿಸಿದ ಬಳಿಕ ಶಾಲೆ ವಿದ್ಯಾರ್ಥಿಗಳು, ಪೋಷಕರು ಶಾಲೆ ಎದುರು ಜೈಶ್ರೀರಾಮ್ ಎಂದು ಘೋಷಣೆ ಕೂಗಿ ಸಂಭ್ರಮಾಚರಿಸಿದರು.ಈ ಪ್ರಕರಣದ ಕುರಿತು ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಲಿದೆ. ಇದರ ವರದಿ ಆಧಾರದ ಮೇಲೆ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ.
ಡಿಡಿಪಿಐ ಕಚೇರಿಗೆ ಮುತ್ತಿಗೆ ಯತ್ನ :
ಶಾಲೆ ಎದುರು ಪ್ರತಿಭಟನೆ ನಡೆಸುವ ಮೊದಲು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪೋಷಕರು ದ.ಕ. ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಆದರೆ ಪೊಲೀಸರು ಮುಖ್ಯ ಪ್ರವೇಶದ್ವಾರವನ್ನು ಮುಚ್ಚಿ ಪ್ರತಿಭಟನಕಾರರನ್ನು ತಡೆದರು. ಧರ್ಮ ನಿಂದನೆ ಮಾಡಿದ ಶಿಕ್ಷಕಿಯನ್ನು ವಜಾ ಮಾಡಿ, ಕಠಿನ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಬಿಜೆಪಿ ಶಾಸಕ ಡಾ। ಭರತ್ ಶೆಟ್ಟಿ, ಜಿ.ಪಂ. ಗೇಟ್ ಬಳಿ ಆಗಮಿಸಿದ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು. ಮಂಗಳವಾರ ಸಂಜೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಬುಧವಾರ ಜಿಲ್ಲಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ತನಿಖೆಗೆ ಶಾಸಕರ ಒತ್ತಾಯ :
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸರಕಾರ ಶಾಲೆ ಮತ್ತು ಶಿಕ್ಷಕಿಯನ್ನು ರಕ್ಷಿಸುವ ಕೆಲಸ ಮಾಡಿದರೆ ಹಿಂದೂ ಸಮಾಜ ತಿರುಗಿ ಬೀಳಲಿದೆ. ಮೊದಲು ವಜಾಗೊಳಿಸಿ ಅನಂತರ ತನಿಖೆ ಮಾಡಿ ಎಂದು ಆಗ್ರಹಿಸಿದರು. ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಮತ್ತಿತರರು ಇದ್ದರು. ತನಿಖೆ ನಡೆಸುತ್ತೇವೆ ಶಿಕ್ಷಕಿ ಮೇಲಿನ ಆಪಾದನೆ ಹಿನ್ನೆಲೆಯಲ್ಲಿ ತನಿಖೆ ವೇಳೆ ಹೋರಾಟ ನಡೆದಿದೆ. ಇದೀಗ ಶಾಲೆಯವರು ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆಗೆ ಎಲ್ಲರೂ ಸಹಕರಿಸಬೇಕು. ಕೂಡಲೇ ಈ ಪ್ರಕರಣದ ತನಿಖೆ ನಡೆಸುತ್ತೇವೆ, ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.