ಉಡುಪಿಯ ಪರ್ಯಾಯೋತ್ಸವ ಆರಂಭ!
– ಮೂಲಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ!
– ದಿನಕ್ಕೇ 50-60 ಸಾವಿರ ಭಕ್ತರ ಆಗಮನದ ನಿರೀಕ್ಷೆ!
NAMMUR EXPRESS NEWS
ಉಡುಪಿ: ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ಜನವರಿ 8ರಿಂದಲೇ ಉಡುಪಿ ನಗರ ವ್ಯಾಪ್ತಿಯಲ್ಲಿ ಪ್ರವಾಸಿಗರು, ಭಕ್ತಾದಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿ, ಸಂಚಾರದಲ್ಲಿ ವ್ಯತ್ಯಯವಾಗದಂತೆ ಹಾಗೂ ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ರಸ್ತೆ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಆರೋಗ್ಯ ಸೇವೆ ಸೇರಿದಂತೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.
ನೈರ್ಮಲ್ಯ :
ಪ್ರತಿದಿನ 50-60 ಸಾವಿರವರೆಗೆ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು ನಗರದ ನೈರ್ಮಲ್ಯ, ಘನ ತ್ಯಾಜ್ಯ ವಿಲೇವಾರಿ, ಶೌಚಾಲಯ ವ್ಯವಸ್ಥೆಯನ್ನು ನಗರಸಭಾ ವತಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವುದರೊಂದಿಗೆ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಪರ್ಯಾಯ ಮಹೋತ್ಸವ ಕಾರ್ಯಕ್ರಮವು ರಾತ್ರಿ ವೇಳೆ ಜರುಗಲಿರುವ ಹಿನ್ನೆಲೆ, ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ದಾರಿ ದೀಪಗಳು ಸುಸಜ್ಜಿತವಾಗಿರುವಂತೆ ಹಾಗೂ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ, ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಅವುಗಳ ನಿರ್ವಹಣೆ ಆಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಮಾಹಿತಿ ಕೌಂಟರ್, ಸಹಾಯವಾಣಿ :
ಮಠದ ಪಾರ್ಕಿಂಗ್ ಆವರಣದಲ್ಲಿ, ಕೌಂಟರ್ ಗಳನ್ನು ತೆರೆಯುವ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಬೇಕು ಹಾಗು ಸಹಾಯವಾಣಿ ತೆರೆಯಬೇಕು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಕುರಿತು ಅರಿವು ಮೂಡಿಸುವ ಚಿತ್ರಗಳನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸುವ ಜೊತೆಗೆ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ಯಾಕೇಜ್ ಸರ್ವೀಸ್ ವಿಶೇಷ ಬಸ್ಗಳ ವ್ಯವಸ್ಥೆ ಮಾಡಬೇಕೆಂದು ಪ್ರವಾಸೋದ್ಯಮ ಹಾಗೂ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾರ್ಕಿಂಗ್ :
ಪ್ರವಾಸಿಗರ, ಸಾರ್ವಜನಿಕರ ಹಾಗೂ ಭಕ್ತಾದಿಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಬೋರ್ಡ್ ಹೈಸ್ಕೂಲ್, ಚರ್ಚ್ ಶಾಲೆ, ಎಂ.ಜಿ.ಎಂ. ಕ್ರೀಡಾಂಗಣ, ಬೀಡಿನಗುಡ್ಡೆ ಮೈದಾನ, ಅಮ್ಮಣ್ಣಿ ಶೆಟ್ಟಿ ಗೌಂಡ್, ಪುರಭವನ ಮತ್ತು ಲಭ್ಯವಿರುವ ಇತರ ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.