ಉಡುಪಿಯಲ್ಲಿ ಮಳೆ ಜತೆ ಸುಂಟರಗಾಳಿ…!
– ಕುಂದಾಪುರ, ಬೈಂದೂರು ಭಾಗದಲ್ಲಿ ಭಾರೀ ಮಳೆ
– ಕಮಲಶಿಲೆ, ಮಾರನಕಟ್ಟೆ ದೇವಾಲಯಕ್ಕೆ ನೀರು
– ಹಲವು ಕಡೆ ಮನೆ, ರಸ್ತೆ ಜಲಾವೃತ: ಅಪಾಯದತ್ತ ಕರಾವಳಿ
NAMMUR EXPRESS NEWS
ಉಡುಪಿ: ಉಡುಪಿಯ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಮಳೆ ಜತೆಗೆ ಭಾರೀ ಸುಂಟರಗಾಳಿ ಕಾಣಿಸಿಕೊಂಡಿದೆ.
ಭಾರೀ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಕೃಷಿಕರು ಕಂಗಾಲಾಗಿದ್ದಾರೆ. ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಭಾರಿ ಶಬ್ಧದೊಂದಿಗೆ ಸುಂಟರಗಾಳಿ ಅಪ್ಪಳಿಸಿದೆ. ಕೆಲವು ಹೊತ್ತು ಚಂಡಮಾರುತದಂತೆ ಸುಂಟರಗಾಳಿ ಭಾಸವಾಗಿದೆ. ಮೊದಲ ಬಾರಿಗೆ ಇಂತಹ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿಯಲ್ಲಿ ಏಕಾಏಕಿ ಸುಂಟರಗಾಳಿ ಕಾಣಿಸಿಕೊಂಡಿದೆ. ಡ್ರೋನ್ ಕ್ಯಾಮೆರಾ ಮೂಲಕ ಮರ, ಮನೆಗಳ ಹಾನಿ ಕುರಿತು ಅಂದಾಜು ಲೆಕ್ಕಚಾರ ನಡೆಸಿದ್ದಾರೆ. ಇನ್ನೂ ರಟ್ಟಾಡಿ ವ್ಯಾಪ್ತಿಯಲ್ಲಿರುವ ಸಾವಿರಾರು ಮರಗಳು ಧರಶಾಹಿಯಾಗಿವೆ. 5 ಸಾವಿರಕ್ಕೂ ಅಧಿಕ ಅಡಿಕೆ ಮರ, 2 ಸಾವಿರದಷ್ಟು ರಬ್ಬರ್ ಮರ ಹಾಗೂ ತೆಂಗಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಮರಗಳು ಕತ್ತರಿಸಿದಂತೆ ನೆಲಕ್ಕುರುಳಿದೆ.
– ಕಮಲಶಿಲೆ ದೇವಾಲಯದಲ್ಲಿ ನೈಸರ್ಗಿಕ ಪುಣ್ಯಸ್ನಾನ
ಉಡುಪಿಯ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ದೇವಿಯ ಚರಣವನ್ನು ಕುಬ್ಜಾ ನದಿ ನೀರು ಸ್ಪರ್ಶ ಮಾಡಿದೆ. ಈ ಮೂಲಕ ದೇವಸ್ಥಾನದಲ್ಲಿ ನೈಸರ್ಗಿಕ ಪುಣ್ಯಸ್ನಾನ ನಡೆದಿದೆ. ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದ್ದಾರೆ. ವರ್ಷಂಪ್ರತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಬರುತ್ತದೆ. ಈ ನೈಸರ್ಗಿಕ ಪುಣ್ಯಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಾರೆ. ಸದ್ಯ ನೀರು ಇಳಿಮುಖವಾಗಿ ದೇವಾಲಯದಿಂದ ತೆರವು ಮಾಡಲಾಗಿದೆ.
ಮಾರಣಕಟ್ಟೆಗೂ ನೀರು!: ಪ್ರಸಿದ್ಧ ದೇವಾಲಯ ಮಾರಣಕಟ್ಟೆಗೆ ನೀರು ನುಗ್ಗಿದೆ. ಕರಾವಳಿಯಲ್ಲಿ ಮಳೆ ಜತೆಗೆ ಕಡಲ ಅಬ್ಬರವೂ ಹೆಚ್ಚಾಗಿದೆ.