ಗಣಿತ ಶಾಸ್ತ್ರ ಉಪನ್ಯಾಸಕರಿಗೆ ಟ್ರೈನಿಂಗ್!
– ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗಣಿತಶಾಸ್ತ್ರ ಶೈಕ್ಷಣಿಕ ಕಾರ್ಯಾಗಾರ
– ಮಕ್ಕಳ ಪಾಠ, ಪರೀಕ್ಷೆ, ಪ್ರಶ್ನೆ ಪತ್ರಿಕೆ ಬಗ್ಗೆ ಸಂವಾದ
NAMMUR EXPRESS NEWS
ಉಡುಪಿ: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು, ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ತ್ರಿಶಾ ಪದವಿಪೂರ್ವ ಕಾಲೇಜು,ಕಲ್ಯಾಣಪುರ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಕಲ್ಯಾಣಪುರದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ 12 ಜುಲೈ 2024ರಂದು ಒಂದು ದಿನದ ಗಣಿತಶಾಸ್ತ್ರ ಶೈಕ್ಷಣಿಕ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಾರುತಿ ಅವರು ಮಾತನಾಡಿ, ವಿದ್ಯಾ ದಾನವೆಂಬುದು ಶ್ರೇಷ್ಠದಾನ. ಪ್ರತಿ ಮಗುವಿನಲ್ಲಿ ಬೌದ್ಧಿಕ ಹಸಿವನ್ನು ಗುರುತಿಸಿ ಸಮರ್ಥ ಪರಿಹಾರ ಒದಗಿಸಿಕೊಡುವುದು ವೃತ್ತಿ ಧರ್ಮವಾಗಬೇಕು ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದಅಶ್ವತ್ ಎಸ್ ಎಲ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸ್ಥಾಪಕರಲ್ಲಿ ಒಬ್ಬರಾದ ಗಣಪತಿ ಭಟ್ ಕೆ ಎಸ್ ರವರು, ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯ ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ, ಉಡುಪಿ ಜಿಲ್ಲಾ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್, ಉಡುಪಿ ಜಿಲ್ಲಾ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿಗಳಾದ ಸುಧೀರ್ ಪ್ರಭು, ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸರಕಾರಿ ಪದವಿಪೂರ್ವ ಕಾಲೇಜು ಹೊನ್ನಾವರದ ಗಣಿತ ಉಪನ್ಯಾಸಕರಾದ ಸತೀಶ ನಾಯ್ಕರವರು ನೀಲನಕ್ಷೆ ಪ್ರಕಾರ ಪ್ರಶ್ನೆ ಪತ್ರಿಕೆ ತಯಾರಿಕಾ ವಿಧಾನದ ಕುರಿತು ಉಪನ್ಯಾಸ ನೀಡಿದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶೈಕ್ಷಣಿಕ ಸಹಾಯಕ ನಿರ್ದೇಶಕರಾದ ಡಾಕ್ಟರ್ ರವಿಪ್ರಕಾಶ್ ವೈ & ಇಂಟೆಗ್ರೇಶನ್ ಆಫ್ಕ್ರಿ ಯೇಟಿವಿಟಿ ಇನ್ ಟು ಕ್ಲಾಸ್ ರೂಮ್ ಟೀಚಿಂಗ್ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.
ಉಡುಪಿ ಜಿಲ್ಲಾ ಗಣಿತ ಉಪನ್ಯಾಸಕ ಬಳಗದವರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಗಣಿತ ಉಪನ್ಯಾಸಕರು, ತ್ರಿಶಾ ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆಯವರು ಸ್ವಾಗತಿಸಿ, ಗಣಿತಶಾಸ್ತ್ರ ಉಪನ್ಯಾಸಕ ವೇದಿಕೆ ಉಡುಪಿ ಜಿಲ್ಲೆಯ ಕಾರ್ಯದರ್ಶಿಗಳಾದ ಸುಧೀರ್ ಪ್ರಭು ವಂದಿಸಿ, ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮರವರು ಕಾರ್ಯಕ್ರಮ ನಿರೂಪಿಸಿದರು.