ವಿದ್ಯುತ್ ಶಾಕ್: ಪತಿ ಜೀವ ಉಳಿಸಲು ಹೋಗಿ ಪತ್ನಿಯೂ ಸಾವು!
– ವಿದ್ಯುತ್ ಪ್ರವಹಿಸಿ ದಂಪತಿಗಳಿಬ್ಬರು ದಾರುಣ ಸಾವು
– ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕರಣಿಕರಮನೆಯಲ್ಲಿ ಘಟನೆ
NAMMUR EXPRESS NEWS
ಬೈಂದೂರು: ವಿದ್ಯುತ್ ಶಾಕ್ ಹೊಡೆದು ಪತಿ ಜೀವ ಉಳಿಸಲು ಹೋಗಿ ಪತ್ನಿಯೂ ಸಾವು ಕಂಡಿರುವ ದಾರುಣ ಘಟನೆ ಶುಕ್ರವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕರಣಿಕರಮನೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯ ಕಟ್ ಬೆಲ್ತೂರು ಗ್ರಾ. ಪಂ ವ್ಯಾಪ್ತಿಯ ಸುಳ್ಸೆ ನಿವಾಸಿ ಮಹಾಬಲ ಅವರು ಕೂಲಿ ಕಾರ್ಮಿಕರಾಗಿದ್ದು ಮನೆ ಸಮೀಪದ ಕರಣಿಕರಮನೆ ಎಂಬಲ್ಲಿನ ಮನೆಯೊಂದಕ್ಕೆ ಶುಕ್ರವಾರ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದಿದ್ದಾಗ ಪತ್ನಿ ಲಕ್ಷ್ಮೀ ಕರಣಿಕರಮನೆ ದಾರಿಯಲ್ಲಿ ಬಂದಿದ್ದ ವೇಳೆ ಕಾಲು ಹಾದಿ ಬಳಿಯ ತೋಡಿನಲ್ಲಿ ಮಹಾಬಲ ಅವರು ವಿದ್ಯುತ್ ತಂತಿ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು.
ಪತಿಯ ಜೀವವನ್ನು ಉಳಿಸಲು ಹೋಗಿ ಪತ್ನಿ ಲಕ್ಷ್ಮಿ ದುರಂತದ ಸಾವು ಕಂಡರು. ಲಕ್ಷ್ಮೀ ಕೂಗಿಕೊಂಡು ನೆರೆಕೆರೆಯವರನ್ನು ಕರೆದಿದ್ದು ಅವರು ಬರುವಷ್ಟರೊಳಗೆ ಒದ್ದೆಯಾಗಿದ್ದ ಮರದ ಕೋಲು ಹಿಡಿದು ಗಂಡನನ್ನು ವಿದ್ಯುತ್ ಶಾಕ್ ನಿಂದ ತಪ್ಪಿಸಲು ಹೋದಾಗ ಮಹಿಳೆಗೂ ವಿದ್ಯುತ್ ಪ್ರವಹಿಸಿ ಸಮೀಪದ ಕೆರೆ ಬಳಿ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಮಹಿಳೆ ಸ್ಥಳಕ್ಕೆ ಹೋಗದಂತೆ ಸ್ಥಳೀಯರು ಕೂಗಿಕೊಂಡರೂ ಕೂಡ ಕ್ಷಣಮಾತ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ನಿವಾಸಿಗಳು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂದು ತಿಳಿದುಬಂದಿದೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಓರ್ವ ಪುತ್ರಿ ಮನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮೃತರಿಗೆ ಪರಿಹಾರಕ್ಕೆ ಪಟ್ಟು
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಶಂಕರನಾರಾಯಣ ವೃತ್ತನಿರೀಕ್ಷಕ ಜಯರಾಮ ಗೌಡ, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿದ್ದು ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಸ್ಥಳದಲ್ಲಿಯೇ ಮೆಸ್ಕಾಂ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಇಬ್ಬರ ಸಾವಿಗೆ ನ್ಯಾಯಕೊಡಿಸಿ. ಘಟನೆ ಬಗ್ಗೆ ತನಿಖೆ ನಡೆಸುವುದಲ್ಲದೆ ಸೂಕ್ತ ಪರಿಹಾರ ನೀಡಲು ಸೂಚನೆ ನೀಡಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸುಮತಿ, ಸ್ಥಳೀಯರಾದ ಶೇಖರ್ ಬಳೆಗಾರ ಭೇಟಿ ನೀಡಿದರು. ಬೈಂದೂರು ತಾಲೂಕಿನ ಈ ಭಾಗದಲ್ಲಿ ತಂತಿಗಳು ಬಹಳ ಸಡಿಲ ಗೊಂಡಿದ್ದು ಮತ್ತು ಮರಗಳ ಕೊಂಬೆಗಳ ಒಳಭಾಗದಲ್ಲಿ ಹೋಗಿರುವುದರಿಂದ ತಂತಿ ತುಂಡಾಗಿ ನೆಲ ಭಾಗಕ್ಕೆ ಬಿದ್ದಿರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.