- 30 ಸಾವಿರ ವಿದ್ಯಾರ್ಥಿಗಳ ಆರ್.ಡಿ. ಸಂಖ್ಯೆ ಹೊಂದಾಣಿಕೆ ಇಲ್ಲ
- ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಜೂ.12ರೊಳಗೆ ಸರಿಪಡಿಸಿಕೊಳ್ಳುವಂತೆ ಕೆಇಎ ಸೂಚನೆ
- ಆರ್ ಡಿ ಸಂಖ್ಯೆ ಸರಿಪಡಿಸದಿದ್ದರೆ ಮೀಸಲಾಗಿ ಸಿಗಲ್ಲ, ಸಾಮಾನ್ಯ ಕೋಟಾದಲ್ಲಿ ಸೀಟು ಹಂಚಿಕೆ
ಬೆಂಗಳೂರು: ಕೆ-ಸಿಇಟಿಗೆ ನೋಂದಣಿ ಮಾಡಿಕೊಂಡಿರುವ 2.6 ಲಕ್ಷ ಅಭ್ಯರ್ಥಿಗಳ ಪೈಕಿ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ. ಸಂಬಂಧಪಟ್ಟ ವಿದ್ಯಾರ್ಥಿಗಳು ಕೂಡಲೇ ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿ ಬದಲಿಗೆ ಸಾಮಾನ್ಯ ಕೋಟಾದಡಿ ಸೀಟು ಪಡೆದುಕೊಳ್ಳಬೇಕಾಗುತ್ತದೆ ಎಂದು ಕೆಇಎ ಎಚ್ಚರಿಕೆ ನೀಡಿದೆ.
ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೂ.7ರಿಂದ 12ರ ವರೆಗೆ ಕೊನೆಯ ಅವಕಾಶ ನೀಡಿದೆ. ಆದರೂ ಇನ್ನೂ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ ಸಿಇಟಿ ಬರೆದಿರುವ ಅಭ್ಯರ್ಥಿಗಳ ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್. ಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿ ಸೌಲಭ್ಯಗಳು ರದ್ದಾಗಿ, ಸಾಮಾನ್ಯ ಕೋಟಾದಡಿ ಬರಲಿದ್ದಾರೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜತೆ ತಾಳೆಯಾಗುವಂತೆ ಜೂ.12ರ ಬೆಳಗ್ಗೆ 11ರ ವರೆಗೆ ತಿದ್ದುಪಡಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಇಡಬ್ಲ್ಯುಎಸ್ ಪ್ರಮಾಣಪತ್ರ ಸಲ್ಲಿಕೆ: ಕೆಲವು ಅಭ್ಯರ್ಥಿಗಳು ಆದಾಯ ಪ್ರಮಾಣ ಪತ್ರದ ಬದಲು ಇಡಬ್ಲ್ಯುಎಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇಲ್ಲ. ಇದನ್ನು ಕೂಡ ವಿದ್ಯಾರ್ಥಿಗಳು ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ಹೊಣೆಗಾರರಾಗಲಿದ್ದಾರೆ ಎಂದು ವಿವರಿಸಿದ್ದಾರೆ. ಆರ್ಡಿ ಸಂಖ್ಯೆಗಳು ತಾಳೆಯಾಗದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.