- ಕುಕ್ಕೆ ಪೂಜೆ ಇಲ್ಲ, ಧರ್ಮಸ್ಥಳದಲ್ಲಿ ಏನು..?
- ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಏನೇನಿದೆ?
NAMMUR EXPRESS NEWS
ಬೆಂಗಳೂರು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ವಿವಿಧ ಸೇವೆ ಅಲಭ್ಯವಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕೆಲ ದೇವಸ್ಥಾನಗಳು ಇಡೀ ದಿನ ಬಂದ್ ಆಗಲಿವೆ.
ದೀಪಾವಳಿ ರಜೆ ಹಿನ್ನೆಲೆ ಧಾರ್ಮಿಕ ಪ್ರವಾಸಕ್ಕೆ, ಹಬ್ಬದ ವಿಶೇಷ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೆಚ್ಚಿನ ಮಂದಿ ತೆರಳುವ ಸಾಧ್ಯತೆಗಳಿರುವುದರಿಂದ ಗ್ರಹಣದಿಂದಾಗಿ ಸೇವೆಗಳ ವ್ಯತ್ಯಾಯದ ಬಗ್ಗೆ ದೇವಸ್ಥಾನಗಳ ಆಡಳಿತ ಮಂಡಳಿಗಳು ವೆಬ್ ಸೈಟ್ ಪ್ರಕಟಣೆ ಮೂಲಕ ಮಾಹಿತಿ ನೀಡಿವೆ.
ಧರ್ಮಸ್ಥಳ ದರ್ಶನ ಬಂದ್ : ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 2:30 ರಿಂದ ರಾತ್ರಿ 7.30 ವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನ ಸಂರ್ಪಣೆ ಛತ್ರದಲ್ಲಿ ಮಧ್ಯಾಹ್ನ 2:30 ರವರೆಗೆ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಂಪೂರ್ಣ ಬಂದ್ ಇರಲಿದೆ . ಯಾವುದೇ ಸೇವೆಗಳು ಮತ್ತು ಪ್ರಸಾದದ ವ್ಯವಸ್ಥೆ ಇರುವುದಿಲ್ಲ ಬುಧವಾರದಿಂದ ಬೆಳಿಗ್ಗೆ 9 ಗಂಟೆಗೆ ಎಲ್ಲಾ ಸೇವೆಗಳು ಆರಂಭಗೊಳ್ಳುತ್ತದೆ.
ಹೊರನಾಡಿನಲ್ಲಿ ಹೊರಗಿನಿಂದ ದರ್ಶನ : ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಮತ್ತು ಮಂತ್ರಾಲಯದಲ್ಲಿ ಮಂಗಳವಾರ ಯಾವುದೇ ಸೇವೆ ಹಾಗೂ ಪ್ರಸಾದ ವ್ಯವಸ್ಥೆ ಇರುವುದಿಲ್ಲ, ಹೊರಗಡೆಯಿಂದ ದರ್ಶನ ಫಲಹಾರ ನೀಡಲಾಗುತ್ತದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಮೋಕ್ಷದ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಸ್ಥಾನದಲ್ಲಿ ಜಪ ಮಾಡಬಹುದು ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಉಡುಪಿಯ ಕೃಷ್ಣಮಠದಲ್ಲಿ ಮಧ್ಯಾಹ್ನದ ಅನ್ನ ಸಂರ್ಪಣೆ ಇರುವುದಿಲ್ಲ. ಆದರೆ ಸಾರ್ವಜನಿಕರಿಗೆ ಕೃಷ್ಣದರ್ಶನಕ್ಕೆ ಅವಕಾಶ ಇರುತ್ತದೆ. ಕುದ್ರಳ್ಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಗ್ರಹಣ ಸಂದರ್ಭದಲ್ಲಿ ದರ್ಶನ ಇರುವುದಿಲ್ಲ. ದೊಡ್ಡಬಳ್ಳಾಪುರ ಸಮೀಪದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 10.30 ರವರೆಗೆ ಮಾತ್ರ ದೇವರ ದರ್ಶನ ಇರುತ್ತದೆ. ನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.
ಭಕ್ತರಿಗೆ ಪ್ರವೇಶವಿಲ್ಲ : ಹಾಸನಾಂಬ ದೇವಸ್ಥಾನ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ, ಬೇಲೂರಿನ ಚೆನ್ನಕೇಶವ ದೇವಸ್ಥಾನ, ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲ, ಸಿಗಂದೂರೇಶ್ವರಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ಇರುವುದಿಲ್ಲ, ಆಯಾ ದೇವಸ್ಥಾನ ಆಡಳಿತ ಮಂಡಳಿಗಳಿಂದ ಅಭಿಷೇಕ ವಿಶೇಷ ಪೂಜೆ ನಡೆಯಲಿದೆ.