- ಟ್ವಿಟರ್ ನಲ್ಲಿ ವಿಧಾನಸಭಾ ಚುನಾವಣೆಗೆ ಅರ್ಜಿ
- ಉಪೇಂದ್ರ ನೇತೃತ್ವದ ಪಕ್ಷಕ್ಕೆ ಭಾರೀ ಡಿಮ್ಯಾಂಡ್
NAMMUR EXPRESS NEWS
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಪಕ್ಷ ಪ್ರಜಾಕೀಯದ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಅಗತ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಟ ಉಪೇಂದ್ರ ತಮ್ಮ ಟ್ವಿಟರ್ ನಲ್ಲಿ “ಮುಂಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ prajaakeeya.org ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ 24ನೇ ಮಾರ್ಚ್ 2023 ರ ಮಧ್ಯರಾತ್ರಿ 12.00 ಗಂಟೆಗೆ ನಿಗದಿಪಡಿಸಲಾಗಿದೆ. 24ರ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಅರ್ಜಿಗಳನ್ನು ಸಮಯದೊಳಗೆ ಸಲ್ಲಿಸಿ” ಎನ್ನುವ ಪೋಸ್ಟನ್ನು ಹಂಚಿಕೊಂಡಿದ್ದಾರೆ.
2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ಮಾರ್ಚ್ 25, 2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ ಎಂದು ಹೇಳಿದ್ದಾರೆ. ತಮ್ಮದೇ ಆದ ವಿಶೇಷ ನಿಲುವುವನ್ನು ಹೊಂದಿರುವ ಇವರು ರಾಜಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ, ಯಾವುದೇ ಖರ್ಚು ಇಲ್ಲದೇ ಒಬ್ಬ ಪೂರ್ಣ ಪ್ರಮಾಣದ ನಾಯಕ ದೇಶದ ಜನತೆಗಾಗಿ ಕೆಲಸ ಮಾಡಬೇಕು ಎನ್ನುವುದು ಎಲ್ಲರಿಗೂ ಇಷ್ಟವಾಗುವಂತಹ ವಿಚಾರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.