ಪ್ಯಾಕೇಟಲ್ಲಿ 1 ಬಿಸ್ಕೆಟ್ ಕಡಿಮೆ ಕೊಟ್ಟ ಕಂಪನಿಗೆ 1 ಲಕ್ಷ ದಂಡ!
– ಗ್ರಾಹಕರಿಗೆ ಒಂದು ಬಿಸ್ಕೆಟ್ ಯಿಂದ 75 ಪೈಸೆ ನಷ್ಟವಾಗುತ್ತದೆ!: ಕೇಸ್ ಕೊಟ್ಟವರು ಯಾರು?
– ಕಂಪನಿಗೆ ಪ್ರಶ್ನಿಸಿದಾಗ ಲೆಕ್ಕ ಅಲ್ಲ ತೂಕ ಎಂದ ಕಂಪನಿ
NAMMUR EXPRESS NEWS
ಚೆನ್ನೈ: 16 ಬಿಸ್ಕೆಟ್ಗಳಿರುವ ಒಂದು ಬಿಸ್ಕೆಟ್ ಪ್ಯಾಕೇಟ್ಗೆ 10 ರೂಪಾಯಿ ಇದೆ ಎಂದು ಅಂದುಕೊಂಡರೂ ಒಂದು ಬಿಸ್ಕೆಟ್ಗೆ ಸುಮಾರು 75 ಪೈಸೆ ಆಗುತ್ತದೆ. ಒಂದು ವೇಳೆ ಲೆಕ್ಕ ತಪ್ಪಿ ಪ್ಯಾಕೇಟ್ ಒಳಗೆ 15 ಬಿಸ್ಕೆಟ್ ಬಂದರೆ ಗ್ರಾಹಕರಿಗೆ 75 ಪೈಸೆ ನಷ್ಟವಾದಂತೆ. ಹೀಗಾಗಿ ಒಂದು ಕಡಿಮೆ ಬಂದಾಗ ಯಾರೂ ಮಾತನಾಡುವುದಿಲ್ಲ. ಹೋದ್ರೆ ಹೋಗ್ಲಿ 75 ಪೈಸೆ ಅಲ್ವಾ ಎಂದು ಅಂದುಕೊಳ್ಳುತ್ತೇವೆ. ಆದರೆ, ಎಲ್ಲ ಸಂದರ್ಭದಲ್ಲಿ ಇದು ಸತ್ಯವಲ್ಲ. ಯಾರಾದರೂ ತಲೆ ಕೆಟ್ಟು ಕೋರ್ಟ್ಗೆ ಹೋದರೆ ಬಿಸ್ಕೆಟ್ ಕಂಪನಿಯ ಪರಿಣಾಮ ನೆಟ್ಟಗಿರುವುದಿಲ್ಲ ಎಂಬುದಕ್ಕೆ ಇಲ್ಲೊಂದು ಪ್ರಕರಣವೇ ಸಾಕ್ಷಿಯಾಗಿದೆ.
ಕಂಪನಿಗೆ ಗ್ರಾಹಕರ ನ್ಯಾಯಾಲಯ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
ತಮಿಳುನಾಡಿನ ಜಿಲ್ಲಾ ಗ್ರಾಹಕ ವೇದಿಕೆಯೊಂದು ಇಂಥದ್ದೊಂದು ತೀರ್ಪು ನೀಡಿದೆ. ಐಟಿಸಿ ಲಿಮಿಟೆಡ್ನ ಸನ್ಫೀಸ್ಟ್ ಕಂಪನಿಗೆ ಈ ಮಟ್ಟಿಗೆ ದೊಡ್ಡ ದಂಡ ಬಿದ್ದಿರುವುದು. ಮಾರಿ ಲೈಟ್ ಬಿಸ್ಕೆಟ್ ಪ್ಯಾಕೇಟ್ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಮೋಸ ಮಾಡಲಾಗಿದೆ ಎಂದು ಗ್ರಾಹಕ ನ್ಯಾಯಾಲಯ ತೀರ್ಮಾನಿಸಿದೆ. ಅಲ್ಲದೆ, ಒಂದು ಕಡಿಮೆ ಬಿಸ್ಕತ್ತು ಪಡೆದ ನೊಂದ ಗ್ರಾಹಕನಿಗೆ 1 ಲಕ್ಷ ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ. ಕಂಪನಿಯು 16 ಬಿಸ್ಕತ್ತುಗಳನ್ನು ಒಳಗೊಂಡಿದೆ ಎಂದು ಜಾಹೀರಾತು ನೀಡಿ ಪ್ಯಾಕೆಟ್ ನಲ್ಲಿ ಕೇವಲ 15 ಬಿಸ್ಕತ್ತುಗಳನ್ನು ಪ್ಯಾಕ್ ಮಾಡಿರುವುದು ಗ್ರಾಹಕರಿಗೆ ವಂಚನೆ ಎಂದು ಹೇಳಲಾಗಿದೆ.
ಕೇಸ್ ಕೊಟ್ಟವರು ಯಾರು?
ಪ್ರಸ್ತುತ ಪ್ರಕರಣದಲ್ಲಿ, ಚೆನ್ನೈ ನಿವಾಸಿ ದಿಲ್ಲಿಬಾಬು ಮನಾಲಿಯ ಮಾರಾಟಗಾರರಿಂದ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು ಸುಮಾರು 25 ಪ್ಯಾಕೆಟ್ ಸನ್ಫೀಸ್ಟ್ ಬಿಸ್ಕೆಟ್ಗಳನ್ನು ಖರೀದಿಸಿದ್ದರು. ಈ ಬಿಸ್ಕೆಟ್ಗಳ ಪ್ಯಾಕೇಟ್ನಲ್ಲಿ 16 ಬಿಸ್ಕೆಟ್ಗಳಿವೆ ಎಂದು ಬರೆಯಲಾಗಿತ್ತು. ಆದರೆ ಬಿಚ್ಚಿ ನೋಡಿದಾಗ ಕೇವಲ 15 ಬಿಸ್ಕತ್ತುಗಳು ಮಾತ್ರ ಇರುವುದನ್ನು ಗಮನಿಸಿದ್ದರು. ಕಡಿಮೆ ಇರುವ ಬಗ್ಗೆ ಅಸಮಾಧಾನಗೊಂಡ ನಂತರ ದಿಲ್ಲಿ ಬಾಬು ಅವರು ಐಟಿಸಿ ಮತ್ತು ಮಾರಾಟಗಾರರನ್ನು ವಿವರಣೆಗಾಗಿ ಸಂಪರ್ಕಿಸಿದ್ದರು. ಅವರು ಸಮಸ್ಯೆ ಪರಿಹರಿಸುವ ಬದಲು ದಿಲ್ಲಿ ಬಾಬು ಅವರನ್ನೇ ಹೀಯಾಳಿಸಿದ್ದರು. 10 ರೂಪಾಯಿ ಬಿಸ್ಕೆಟ್ಗೆ 10 ಕೋಟಿ ರೂ.ಗಳಲ್ಲಿ ಮೋಸ ಮಾಡಿದಂತೆ ಆಡುತ್ತಿರಲ್ವಾ ಎಂದು ನಿಂದಿಸಿದ್ದರು. ಬೇಸರಗೊಂಡ ಅವರು ಜಿಲ್ಲಾ ಗ್ರಾಹಕ ವೇದಿಕೆ ಮೆಟ್ಟಿಲೇರಿದ್ದರು.
ನ್ಯಾಯಾಲಯದಲ್ಲಿ ಅವರು ಕಂಪನಿಯ ಮೋಸದ ವ್ಯಾಪ್ತಿಯನ್ನು ಗಮನಸೆಳೆದರು. ಅವರ ಲೆಕ್ಕಾಚಾರದ ಪ್ರಕಾರ ಒಂದು ಬಿಸ್ಕತ್ತು ಬೆಲೆ 0.75 ರೂ. ಕಂಪನಿಯು ಪ್ರತಿದಿನ 50 ಲಕ್ಷ ಪ್ಯಾಕೆಟ್ಗಳನ್ನು ಉತ್ಪಾದಿಸುತ್ತದೆ. ಅಂದರೆ ಅದು ಪ್ರತಿದಿನ ತನ್ನ ಗ್ರಾಹಕರಿಗೆ 29 ಲಕ್ಷ ರೂ.ಗಿಂತ ಹೆಚ್ಚು ಮೋಸ ಮಾಡುತ್ತಿದೆ ಎಂದು ವಾದ ಮಾಡಿದರು.
ಲೆಕ್ಕ ಅಲ್ಲ ತೂಕ ಎಂದ ಕಂಪನಿ!
ಬಿಸ್ಕೆಟ್ಗಳನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗಿದೆಯೇ ಹೊರತು ಪ್ರಮಾಣವಲ್ಲ ಎಂದು ಹೇಳುವ ಮೂಲಕ ಕಂಪನಿಯು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ಆದಾಗ್ಯೂ, ಪ್ಯಾಕೆಟ್ ಉಲ್ಲೇಖಿಸಿದ ಪ್ರಮಾಣಕ್ಕಿಂತ ಕಡಿಮೆ ಇತ್ತು. ಆದಾಗ್ಯೂ ಪ್ಯಾಕೆಟ್ಗಳಲ್ಲಿ ನಮೂದಿಸಿರುವ 76 ಗ್ರಾಂ ಬದಲಿಗೆ 74 ಗ್ರಾಂ ಮಾತ್ರ ಇತ್ತು. ಈ ನಿಟ್ಟಿನಲ್ಲಿ, ಕಾನೂನು ಮಾಪನಶಾಸ್ತ್ರ ಕಾಯ್ದೆಯ ಪ್ರಕಾರ 4.5 ಗ್ರಾಂ ದೋಷವನ್ನು ಪತ್ತೆ ಹಚ್ಚಲಾಗಿತ್ತು.