ಮಂಗಳೂರು ಪಾಲಿಕೆಗೆ ನೂತನ ಸಾರಥಿಗಳು!
– ಮೇಯರ್ ಆಗಿ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು
– ಉಪ ಮೇಯರ್ ಆಗಿ ಬಿಜೆಪಿಯ ಸುನಿತಾ ಆಯ್ಕೆ
NAMMUR EXPRESS NEWS
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಸಾರಥಿಗಳ ಆಯ್ಕೆ ನಡೆದಿದೆ. 24 ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಉಪ ಮೇಯರ್ ಆಗಿ ಬಿಜೆಪಿಯ ಸುನಿತಾ ಆಯ್ಕೆಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯನ್ನು ಚುನಾವಣಾಧಿಕಾರಿ ಡಾ.ಜಿ ಸಿ ಪ್ರಕಾಶ್ ಚುನಾವಣೆ ನಡೆಸಿಕೊಟ್ಟರು. ಈ ಅವಧಿಯ 4ನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು.
ಬಲಾಬಲವೇನು?:
ಮಹಾ ನಗರ ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44 ಸದಸ್ಯರು,ಕಾಂಗ್ರೆಸ್ 14 ಸದಸ್ಯರು ಹಾಗೂ ಇಬ್ಬರು ಎಸ್ಡಿಪಿಐ ಸದಸ್ಯರು ಇದ್ದ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಇದ್ದು, ಕೊಡಿಯಾಲ್ಬೈಲ್ ವಾರ್ಡ್ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಅವರು ಮೇಯರ್ ಹುದ್ದೆಗೆ ಬಹುಮತದಿಂದ ಆಯ್ಕೆಯಾಗಿದ್ದಾರೆ. ಪಾಲಿಕೆಯಲ್ಲಿರುವ ಪರಿಶಿಷ್ಟ ಜಾತಿಯ ಏಕೈಕ ಸದಸ್ಯೆ ಪಣಂಬೂರು ವಾರ್ಡ್ ಸುನೀತಾ ಅವರು ಉಪ ಮೇಯರ್ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಎಲ್ಲಾ ಸದಸ್ಯರು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.