ಕೇರಳಕ್ಕೆ ಕಾಲಿಟ್ಟ ನಿಫಾ ವೈರಸ್ : ಇಬ್ಬರು ಬಲಿ!
– ಲಿಬಿಯಾದಲ್ಲಿ ಡ್ಯಾಮ್ ಒಡೆದು 2500 ಹೆಚ್ಚು ಜನ ಸಾವು
NAMMUR EXPRESS NEWS
ಕೋಝಿಕೋಡ್: ಕೇರಳಕ್ಕೆ ಮತ್ತೆ ನಿಫಾ ವೈರಸ್ ಕಾಲಿಟ್ಟಿದೆ. ಮಾರಣಾಂತಿಕ ನಿಫಾ ವೈರಸ್ನಿಂದ ಕೇರಳದ ಕೋಝಿಕೋಡ್ನಲ್ಲಿ ಇಬ್ಬರು ಸಾವು ಸಂಭವಿಸಿರುವುದು ದೃಢಪಟ್ಟಿದೆ. ಮೃತಪಟ್ಟವರು ಮತ್ತು ಆಸ್ಪತ್ರೆಗೆ ದಾಖಲಾದವರ ರಕ್ತದ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿತ್ತು. ಮಂಗಳವಾರ ಸಂಜೆ ಈ ದೃಢೀಕರಣ ಬಂದಿದೆ. ಇಬ್ಬರು ಮೃತ ವ್ಯಕ್ತಿಗಳ ಸಂಪರ್ಕಕ್ಕೆ ಬಂದ 70 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಲಿಬಿಯಾದಲ್ಲಿ ಡ್ಯಾಮ್ ಒಡೆದು 2500 ಜನ ಸಾವು
ಮೊರಕ್ಕೊ ದುರಂತ ಮಾಸುವ ಮುನ್ನವೇ ಲಿಬಿಯಾದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದ ಅಬ್ಬರಕ್ಕೆ ಎರಡು ಡ್ಯಾಮ್ ಗಳು ಒಡೆದಿದ್ದು ಎರಡುವರೆ ಸಾವಿರಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿದ್ದಾರೆ. ಉತ್ತರ ಆಫ್ರಿಕಾದ ಲಿಬಿಯಾ ದೇಶದ ಪೂರ್ವ ಭಾಗಗಳಲ್ಲಿ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹದ ಅಬ್ಬರಕ್ಕೆ ಸುಮಾರು 2,500 ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ 10,000 ದಾಟಬಹುದು ಎಂದು ಅಂದಾಜಿಸಲಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದ ಲಿಬಿಯಾದಲ್ಲಿ ಭಾರಿ ಮಳೆ ಆಗುತ್ತಿದೆ. ಡರ್ನ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದು ಎರಡು ಡ್ಯಾಮ್ ಗಳು ಒಡಿದಿವೆ. ರಾತ್ರಿ ಸುನಾಮಿಯಂತೆ ಅಪ್ಪಳಿಸಿದ್ದರಿಂದ ಮಲಗಿದ್ದ ಜನರು ಹಾಗೆಯೇ ಕೊಚ್ಚಿ ಹೋಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಮತ್ತು ಜೀವ ಹಾನಿ ಉಂಟಾಗಿದೆ.
ಭೀಕರ ಅಪಘಾತಕ್ಕೆ 13 ಜನ ದುರ್ಮರಣ!
ಜೈಪುರ: ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, 13 ಜನ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆ 4.30ರ ಸುಮಾರಿಗೆ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಪ್ಯಾಸೆಂಜರ್ ಬಸ್ಗೆ ಹಿಂದಿನಿಂದ ಬಂದ ಯಮರೂಪಿ ಟ್ರಕ್ ಗುದ್ದಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ಥಾನದಿಂದ ಉತ್ತರ ಪ್ರದೇಶದ ಮಥುರಾಗೆ ಸುಮಾರು 60 ಪ್ರಯಾಣಿಕರು ಬಸ್ನಲ್ಲಿ ತೆರಳುತ್ತಿದ್ದರು. ರಾಜಸ್ಥಾನದ ಲಖನ್ಪುರ ಪ್ರದೇಶದ ಹೆದ್ದಾರಿ ಬಳಿ ಬಸ್ ನಿಲ್ಲಿಸಲಾಗಿತ್ತು. ಇದೇ ವೇಳೆ ವೇಗವಾಗಿ ಬಂದ ಟ್ರಕ್ ಬಸ್ಗೆ ಹಿಂಬದಿಯಿಂದ ಗುದ್ದಿದೆ. ಟ್ರಕ್ ಗುದ್ದಿದ ತೀವ್ರತೆಗೆ ಬಸ್ನಲ್ಲಿದ್ದ ಐವರು ಪುರುಷರು ಹಾಗೂ ಆರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 15 ಜನ ಮೃತಪಟ್ಟಿದ್ದು, ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಜೀಪ್ ಹಾಗೂ ಬಸ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದರು. ಲಖೋವಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಜೀಪ್ನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದರು.