5 ಸಾವಿರ ತೆಂಗಿನಕಾಯಿ, ಕಬ್ಬಲ್ಲಿ ಗಣಪತಿ!
– ಗಮನ ಸೆಳೆದ ಮಂಗಳೂರು ಶರವು ಗಣಪತಿ
– ಉಡುಪಿಯ ಚಂದ್ರಯಾನ ಗಣಪನಿಗೆ ನಮನ
NAMMUR EXPRESS NEWS
ಮಂಗಳೂರು: ಮಂಗಳೂರು ಶರವು ಶ್ರೀ ಮಹಾಪತಿ ದೇವಸ್ಥಾನದಲ್ಲಿ ಚೌತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಕ್ತರು ಅಧಿಕ ಸಂಖ್ಯೆಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರದ್ಧಾ ಭಕ್ತಿಯಿಂದ ಮಹಾಗಣಪತಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆ ಉಷಾಃ ಕಾಲ ಪೂಜೆ, ಮಹಾಗಣಪತಿ ದೇವರಿಗೆ ಕಟ್ಟೋಕ್ತ ಪೂಜೆ, ಮಹಾಗಣಪತಿ
ಹೋಮ ಪೂರ್ಣಾಹುತಿ ಹಾಗೂ ಮಧ್ಯಾಹ್ನ ಐದು ಸಾವಿರ ತೆಂಗಿನ ಕಾಯಿಯ ವಿಶೇಷ ಪಲ್ಲಪೂಜೆ ಮತ್ತು ಬಳಿಕ ರಥೋತ್ಸವ. ಮಹಾಗಣಪತಿ ದೇವರ ಎದುರು ಕಬ್ಬುಗಳಿಂದ ಕೋಟೆಯ ರೀತಿ ಕಟ್ಟಿ ಅದರೊಳಗೆ 5 ಸಾವಿರ ತೆಂಗಿನಕಾಯಿ ಭಾಗ ಮಾಡಿ ಬಳಿಕ ಗಣಪತಿ ದೇವರಿಗೆ ಇಷ್ಟವಾದ ಎಲ್ಲವುಗಳನ್ನು ಹಾಕಿ ವಿಶೇಷ ಪೂಜೆ ನೆರವೇರಿಸಲಾಯಿತು.
ಭಕ್ತರು ಸೇವಾರೂಪದಲ್ಲಿ ನೀಡಿದ್ದ ತೆಂಗಿನಕಾಯಿಗಳನ್ನು ಈ ಪೂಜೆ ನಡೆಸಲಾಯಿತು. ಸಂಜೆ ಚೌತಿ ಮಹಾ ಗಣಪತಿ ಹೋಮದ ಪ್ರಸಾದ ವಿತರಣೆ, ದೇವಸ್ಥಾನದ ಆಡಳಿತ ಮೊಕೇಸರ ಶರವು ರಾಘವೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆದವು. ಶರವು ದೇವಳದಲ್ಲಿ ಕಬ್ಬುಗಳಿಂದ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಉಡುಪಿಯಲ್ಲಿ ಚಂದ್ರಯಾನ ಗಣಪ
ಗಣೇಶ ಚತುರ್ಥಿಯ ಪ್ರಯುಕ್ತ ಉಡುಪಿ ನಗರದಾದ್ಯಂತ ಗಣಪನನ್ನು ನೂರೆಂಟು ಆಕಾರಗಳಲ್ಲಿ ಆರಾಧನೆ ಮಾಡಿದ್ದಾರೆ.ಮಣಿಪಾಲದ ವೇಣುಗೋಪಾಲ ದೇವಸ್ಥಾನದಲ್ಲಿ ಚಂದ್ರಯಾನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ರಾಘವೇಂದ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರ ಕಲ್ಪನೆಯಲ್ಲಿ ಈ ವಿಭಿನ್ನ ಗಣಪತಿ ಮೂಡಿಬಂದಿದೆ. ವಿಭಿನ್ನ ರೀತಿಯಲ್ಲಿ ತಯಾರಿಸಿರುವ ಚಂದ್ರಯಾನ ಗಣಪತಿ ಭಕ್ತರನ್ನು ಆಕರ್ಷಿಸುತ್ತಿದೆ.