2024ಕ್ಕೆ ಅದ್ದೂರಿ ಸ್ವಾಗತ…!
– ಎಲ್ಲೆಡೆ ಸಂಭ್ರಮ: ಶುಭಾಶಯಗಳ ವಿನಿಮಯ
– ರೆಸಾರ್ಟ್ ಮತ್ತು ರೆಸ್ಟೋರೆಂಟ್ ಗಳು ಫುಲ್!
– ಪಬ್ ಮತ್ತು ಬಾರ್ ಗಳು ಫುಲ್ ಬ್ಯುಸಿ!
NAMMUR EXPRESS NEWS
ಬೆಂಗಳೂರು: ಇಡೀ ವಿಶ್ವವೇ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದೆ. 2024ಕ್ಕೆ ಎಲ್ಲಡೆಯೂ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಪ್ರತಿ ರಸ್ತೆಗಳು, ಕ್ಲಬ್, ಪಬ್, ಬಾರ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಎಲ್ಲೆಡೆಯೂ ಝಗಮಗ ಬೆಳಕಿನ ನಡುವೆ, ಸಂಗೀತ, ನೃತ್ಯ, ತಿಂಡಿ ತಿನಿಸುಗಳೊಂದಿಗೆ ಮದ್ಯಪಾನವೂ ಜೋರಾಗಿತ್ತು. ಮಧ್ಯ ರಾತ್ರಿಯ ಹೊಸ ವರ್ಷದ ಆಹ್ವಾನ ಕಣ್ ಕುಕ್ಕುವಂತಿದ್ದು ಜನರ ಸಂಭ್ರಮ ಮಿತಿ ಮೀರಿದ್ದು ಇಡೀ ದೇಶದಾದ್ಯಂತ ಕಂಡು ಬಂದ ದೃಶ್ಯವಾಗಿತ್ತು. ಮುಖ್ಯ ರಸ್ತೆಗಳಲ್ಲಿ, ಕಮರ್ಷಿಯಲ್ ಏರಿಯಾಗಳಲ್ಲಿ ಪೋಲೀಸರ ರೌಂಡ್ ಗಳೂ ಜೋರಾಗಿದ್ದು ಮಧ್ಯರಾತ್ರಿಯ ನಂತರ ಸದ್ದು ಗದ್ದಲ, ಗಲಾಟೆ ಮತ್ತು ಅಹಿತಕರ ಘಟನೆಗಳಾಗದ ಹಾಗೆ ತಡೆಯುವಲ್ಲಿ ಸಫಲರಾಗಿದ್ದಾರೆ. ಅಲ್ಲಲ್ಲಿ ಪಾನಮತ್ತ ಜನರ ರಂಪಾಟಗಳು ಕಂಡುಬಂದಿದ್ದು, ಅವರನ್ನು ರಕ್ಷಿಸುವಲ್ಲಿ, ನೂಕು ನುಗ್ಗಲು ತಡೆದು ಕ್ಷೇಮವಾಗಿ ಮನೆ ತಲುಪಿಸುವ ನಿಟ್ಟಿನಲ್ಲಿ ನಗರದಾದ್ಯಂತ ಪೋಲೀಸರು ಹರಸಾಹಸ ಮಾಡಿದ್ದಾರೆ.
ಜನಜಂಗುಳಿ ನಿವಾರಿಸುವ ಸಲುವಾಗಿ ಲಘು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. ಈ ಮಧ್ಯೆಯೂ ಹೊಸ ವರ್ಷದ ಸಂಭ್ರಮ ಎಲ್ಲೆಡೆಯೂ ಮನೆಮಾಡಿತ್ತು. ಹೊಸ ವರ್ಷ ವಾರಾಂತ್ಯದಲ್ಲಿ ಬಂದಿರುವುದು ಅನುಕೂಲ ಮತ್ತು ಇನ್ನಷ್ಟು ಮೆರುಗು ತಂದಿದೆ. ರಾಜ್ಯದ ಎಲ್ಲಾ ಹೋಮ್ ಸ್ಟೇ, ರೆಸಾರ್ಟ್ ಗಳು, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಫುಲ್ ಬ್ಯುಸಿಯಾಗಿದ್ದು, ಮ್ಯೂಸಿಕ್ ಡ್ಯಾನ್ಸ್ ಮತ್ತು ಅನ್ ಲಿಮಿಟೆಡ್ ಫುಡ್, ಡ್ರಿಂಕ್, ಡಿಜೆ ಮತ್ತು ಫನ್ ಜೊತೆಗೆ ಭರ್ಜರಿಯಾಗಿ ನಡೆಯಿತು. ಡಿಸೆಂಬರ್. 31 ರ ಅರ್ಧರಾತ್ರಿಯ ಚುಮು ಚುಮು ಚಳಿಯಲ್ಲಿ ಹೊಸವರ್ಷದ ಸಂಭ್ರಮವನ್ನು ಗದ್ದೆ ಬಯಲಿನಲ್ಲಿಯೂ ಆಚರಿಸಿದ್ದು ಮಲೆನಾಡಿನ ವಿಶೇಷವಾಗಿದೆ.