ವಾಟ್ಸ್ಆ್ಯಪ್ ಖಾತೆಗಳಿಗೂ ಬಂತು ನಿಯಮ!
– ಮಾಡಬಾರದ್ದು ಮಾಡಿದರೆ ವಾಟ್ಸ್ಆ್ಯಪ್ ಆಗುತ್ತೆ ಬಂದ್!
– ಭಾರತದ 71ಲಕ್ಷ ವಾಟ್ಸ್ಆ್ಯಪ್ ಅಕೌಂಟ್ ಬ್ಯಾನ್!
NAMMUR EXPRESS NEWS
ನವದೆಹಲಿ: ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ ಆ್ಯಪ್ ಕಳೆದ ನವೆಂಬರ್ ತಿಂಗಳಲ್ಲಿ ಬರೋಬ್ಬರಿ 71ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದ್ದು, 2021ರ ಬಳಕೆದಾರರ ಸುರಕ್ಷತ ಕಾಯಿದೆ 4ರ ಅಡಿಯಲ್ಲಿ ವಾಟ್ಸ್ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷ ನವೆಂಬರ್ 1 ಮತ್ತು ನವೆಂಬರ್ 30 ರ ನಡುವೆ 71,96,000 ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರಿಂದ ಸ್ವೀಕರಿಸಿದ 8841 ಕುಂದು ಕೊರತೆಗಳ ಆಧಾರದ ಮೇಲೆ ಈ ಖಾತೆಗಳನ್ನು ನಿಷೇಧಿಸುವ ನಿರ್ಧಾರವನ್ನು ವಾಟ್ಸ್ಆ್ಯಪ್ ತೆಗೆದುಕೊಂಡಿದೆ. ಇವುಗಳಲ್ಲಿ ಖಾತೆಗಳನ್ನು ನಿಷೇಧಿಸುವುದು ಅಥವಾ ಹಿಂದೆ ನಿಷೇಧಿತ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಸೇರಿದೆ.
ಬ್ಯಾನ್ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸ್ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ವಾಟ್ಸ್ಆ್ಯಪ್ ನಿಂದನೆಯನ್ನು ತಡೆಗಟ್ಟುವ ಕ್ರಮದಲ್ಲಿ ಮುಂಚೂಣಿಯಲ್ಲಿದೆ. ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ವಾಟ್ಸ್ ಆ್ಯಪ್ ಮ್ಯಾನೇಜ್ಮೆಂಟ್ ಹೇಳಿದೆ.
ವಾಟ್ಸ್ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಸಿಮ್ ಖರೀದಿಗೂ ಕಟ್ಟು ನಿಟ್ಟಿನ ನಿಯಮಗಳು ಬಂದಿದ್ದು, ಇದೀಗ ವಾಟ್ಸ್ ಆ್ಯಪ್ ನಿಯಮಗಳು ಹೀಗೆ ಬದಲಾಗಿದ್ದು ಸಮಾಜದ ಮತ್ತು ಜನರ ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕವಾಗಿದೆ.