ಅಯೋಧ್ಯೆಯಲ್ಲಿ ಬಿರುಸಿನ ತಯಾರಿ
– ಹಸುವಿನ ಸಗಣಿಯಿಂದ 21 ಸಾವಿರ ದೀಪಗಳು!
– ಅಯೋಧ್ಯೆಗೆ ರವಾನೆ
– ಪವಿತ್ರ ದೀಪಾವಳಿ ಆಚರಣೆಗೆ ಸಕಲ ಸಿದ್ಧತೆ
NAMMUR EXPRESS NEWS
ನವದೆಹಲಿ: ಜ. 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭ ನಡೆಯಲಿದ್ದು ಈ ಸಂಭ್ರಮಕ್ಕೆ ದೇಶವ್ಯಾಪಿ ಕಾಣಿಕೆಗಳು ಹರಿದು ಬರುತ್ತಿದೆ. ಹಾಗೆಯೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನದಂದು ದೇಶವಾಸಿಗಳು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಿದ್ದಾರೆ. ಇನ್ನು ಮುಜಾಫರ್ಪುರದ ಸಕ್ರಾ ಬ್ಲಾಕ್’ನ ಮಹಿಳೆಯರು ಹಸುವಿನ ಸಗಣಿ ದೀಪಗಳನ್ನು ಸಿದ್ಧಪಡಿಸಿ, ಅವುಗಳನ್ನು ಅಯೋಧ್ಯೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ಮುಜಾಫರ್ಪುರ ಜಿಲ್ಲೆಯ ಸಕ್ರಾ ಬ್ಲಾಕ್’ನ ವಿಶುನ್ಪುರ ಬಾಘನಗರಿ ಗ್ರಾಮದ ಮಹಿಳೆಯರು ದೀಪಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಇಲ್ಲಿನ ಮಹಿಳೆಯರು ಹಸುವಿನ ಸಗಣಿಯಿಂದ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆ ಹೊರತುಪಡಿಸಿ, ಬ್ಲಾಕ್ ವ್ಯಾಪ್ತಿಯ 27 ಪಂಚಾಯತ್’ಗಳಿಗೆ ತಲಾ ಐದು ದೀಪಗಳನ್ನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ದೀಪವನ್ನು ತಯಾರಿಸಲು ಶುದ್ಧ ಹಸುವಿನ ಸಗಣಿ ಬಳಸಲಾಗುತ್ತಿದೆ. ಅದು ಒಣಗಿದ ನಂತರ ಪ್ಯಾಕ್ ಮಾಡಿ ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಈ ಮಹಿಳೆಯರು ಹೇಳಿದ್ದಾರೆ.
ಅಯೋಧ್ಯೆ 21 ಸಾವಿರ ದೀಪಗಳು:
ಇಲ್ಲಿನ ಮುಖ್ಯಸ್ಥೆ ಬಬಿತಾ ಕುಮಾರಿ ಮಾತನಾಡಿ, “21 ಸಾವಿರ ದೀಪಗಳನ್ನು ತಯಾರಿಸಲಾಗುತ್ತಿದ್ದು, ಅದನ್ನು ರಾಮಮಂದಿರ ಅಯೋಧ್ಯೆಗೆ ಕಳುಹಿಸಲಾಗುವುದು. ಇದಲ್ಲದೇ ಬ್ಲಾಕ್ ನ ಎಲ್ಲ ಪಂಚಾಯಿತಿಗಳಿಗೆ ತಲಾ ಐದರಂತೆ ಕಳುಹಿಸಲಾಗುವುದು’ ಎಂದಿದ್ದಾರೆ.